ಮುಂಡಗೋಡ:
ಕಾಡಿನಿಂದ ನೀರು–ಆಹಾರ ಹುಡುಕುತ್ತ ನಾಡಿನತ್ತ ಬಂದಿದ್ದ ಒಂದು ಅಮಾಯಕ ಜಿಂಕೆ, ಗ್ರಾಮಸ್ಥರ ಕಣ್ಣೆದುರೇ ಪ್ರಾಣ ಕಳೆದುಕೊಂಡ ಕರುಣಾಜನಕ ಘಟನೆ ಗುರುವಾರ ಸನವಳ್ಳಿ ಗ್ರಾಮದಲ್ಲಿ ನಡೆದಿದೆ.
ಸನವಳ್ಳಿ ಜಲಾಶಯ ಹಾಗೂ ಅರಣ್ಯ ಪ್ರದೇಶಕ್ಕೆ ಸಮೀಪವಿರುವ ಗ್ರಾಮವಾಗಿರುವುದರಿಂದ, ಬೇಸಿಗೆ ಕಾಲದಲ್ಲಿ ಜಿಂಕೆಗಳು ನೀರು ಮತ್ತು ಆಹಾರ ಅರಸಿ ಗ್ರಾಮ ಹತ್ತಿರ ಬರುತ್ತಿರುವುದು ಸಾಮಾನ್ಯ. ಇದೇ ರೀತಿ ಬಂದಿದ್ದ ಜಿಂಕೆಯನ್ನು ಕಂಡು ಕೆಲವು ಬೀದಿ ನಾಯಿಗಳು ಬೆನ್ನಟ್ಟಿವೆ. ಭಯದಿಂದ ಓಡಿದ ಜಿಂಕೆ ಗ್ರಾಮ ಹತ್ತಿರ ಆಶ್ರಯ ಪಡೆದರೂ, ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಜಿಂಕೆಯ ಮೇಲೆ ನಾಯಿಗಳು ದಾಳಿ ನಡೆಸುತ್ತಿದ್ದಾಗ ಸ್ಥಳೀಯರು ಧಾವಿಸಿ ಅದನ್ನು ರಕ್ಷಿಸಿದರು. ಗಾಯಗೊಂಡಿದ್ದ ಜಿಂಕೆಯನ್ನು ಉಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡಿದರೂ, ಅದು ಮತ್ತೆ ತಪ್ಪಿಸಿಕೊಂಡು ಓಡುವ ವೇಳೆ ಮತ್ತೊಮ್ಮೆ ನಾಯಿಗಳ ಗುಂಪು ಬೆನ್ನಟ್ಟಿತು. ಸನವಳ್ಳಿ ಡ್ಯಾಂ ಕಾಲುವೆ ಹತ್ತಿರ ಮತ್ತೆ ನಡೆದ ದಾಳಿಯಲ್ಲಿ ಜಿಂಕೆ ಗಂಭೀರವಾಗಿ ಗಾಯಗೊಂಡು ಕೊನೆಗೆ ಪ್ರಾಣ ಬಿಟ್ಟಿತು.
“ನಮ್ಮ ಕಣ್ಣೆದುರೇ ಜಿಂಕೆ ನರಳುತ್ತಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಉಳಿಸಲಾಗಲಿಲ್ಲ,” ಎಂದು ಸ್ಥಳೀಯರು ಕಣ್ಣೀರಿನಿಂದ ತಮ್ಮ ಬೇಸರ ವ್ಯಕ್ತಪಡಿಸಿದರು. ಘಟನೆ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ, ಸಾವನ್ನಪ್ಪಿದ ಜಿಂಕೆಯನ್ನು ವಶಕ್ಕೆ ಪಡೆದು ಅಂತ್ಯಕ್ರಿಯೆ ನೆರವೇರಿಸಿದರು.
ಹಲವು ವರ್ಷಗಳಿಂದ ಮುಂದುವರಿದ ಸಮಸ್ಯೆ
ಸನವಳ್ಳಿ ಜಲಾಶಯ ಹಾಗೂ ಅರಣ್ಯ ಪ್ರದೇಶದ ಸುತ್ತಮುತ್ತ ಜಿಂಕೆಗಳ ಸಂಖ್ಯೆ ಹೆಚ್ಚು. ನೀರು ಮತ್ತು ಹಸಿರು ಆಹಾರಕ್ಕಾಗಿ ಅವುಗಳು ನಾಡಿನತ್ತ ಬರುತ್ತಿದ್ದಾಗ ನಾಯಿಗಳ ದಾಳಿಗೆ ಒಳಗಾಗುವುದು ಇಲ್ಲಿ ಸಾಮಾನ್ಯವಾಗುತ್ತಿದೆ. ಕಳೆದ ಐದು–ಆರು ವರ್ಷಗಳಲ್ಲಿ ಹದಿನೈದಕ್ಕೂ ಹೆಚ್ಚು ಜಿಂಕೆಗಳು ಸಾವನ್ನಪ್ಪಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೆಲವೆಡೆ ನಾಯಿ ದಾಳಿಯಿಂದ, ಇನ್ನೂ ಕೆಲವೆಡೆ ಗದ್ದೆಯ ಬೇಲಿಗೆ ಕೊಂಬು ಸಿಲುಕಿ ಜಿಂಕೆಗಳು ಪ್ರಾಣ ಕಳೆದುಕೊಂಡಿವೆ. ಕಾಡುಪ್ರಾಣಿಗಳ ರಕ್ಷಣೆಗೆ ಆಗ್ರಹ “ನಾವು ಅನೇಕ ಬಾರಿ ಜಿಂಕೆಗಳನ್ನು ರಕ್ಷಿಸಿದ್ದೇವೆ. ಆದರೆ ಕೆಲ ಸಂದರ್ಭಗಳಲ್ಲಿ ನಾಯಿ ಹಿಂಡುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಸುಮಾರು ಆರು ವರ್ಷಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಜಿಂಕೆಗಳು ಮೃತಪಟ್ಟಿವೆ,” ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕಾಡು ಪ್ರಾಣಿಗಳ ರಕ್ಷಣೆ ಇಲಾಖೆಯ ಹೊಣೆ ಎಂದು ಅವರು ಒತ್ತಾಯಿಸಿದ್ದಾರೆ. ಕಾಡುಪ್ರಾಣಿಗಳು ನಾಡಿನತ್ತ ಬಾರದಂತೆ ಸೂಕ್ತ ಬೇಲಿ ವ್ಯವಸ್ಥೆ ಮಾಡಬೇಕು. ಅರಣ್ಯ ಪ್ರದೇಶದಲ್ಲಿ ಗಸ್ತು ಹೆಚ್ಚಿಸಬೇಕು. ಬೇಸಿಗೆ ಮುನ್ನವೇ ಕಾಡಿನೊಳಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಾಡಿನ ಮೌನವನ್ನು ಒಡೆದು ನಾಡಿನತ್ತ ಬಂದ ಆ ಜಿಂಕೆ, ಕೊನೆಗೆ ಮಾನವರ ಮಧ್ಯೆಯೇ ಪ್ರಾಣ ಕಳೆದುಕೊಂಡಿದೆ. ಈ ಘಟನೆ ಕಾಡು–ನಾಡು ಸಂಘರ್ಷದ ಕಹಿ ನೆನಪಾಗಿ ಉಳಿದಿದ್ದು, ನಿರಪರಾಧ ಜೀವಗಳ ರಕ್ಷಣೆಗೆ ತಕ್ಷಣ ಕ್ರಮ ಅಗತ್ಯವೆಂಬ ಸಂದೇಶವನ್ನು ಮತ್ತೆ ಒತ್ತಿಹೇಳುತ್ತಿದೆ.
