ಕಾರವಾರ:
ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕಾರವಾರಕ್ಕೆ ಬಾಂಬ್ ಬೆದರಿಕೆಯ ಇ-ಮೇಲ್ ಬಂದ ಹಿನ್ನೆಲೆಯಲ್ಲಿ ಆತಂಕ ಸೃಷ್ಟಿಯಾಗಿದ್ದು, ಪೊಲೀಸ್ ಇಲಾಖೆಯು ಎಚ್ಚೆತ್ತುಕೊಂಡಿದೆ.
ಕಾರವಾರ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆಡಳಿತ ಕಚೇರಿಯ ಕಂಪ್ಯೂಟರ್ ವಿಭಾಗಕ್ಕೆ ಇಂದು ಬೆಳಗ್ಗೆ 08:25ಕ್ಕೆ ಈ ಮೇಲ್ ಬಂದಿದೆ.
pdjuttara kannada@karnata.gov.in ವಿಳಾಸಕ್ಕೆ ಬಂದಿರುವ ಈ ಮೇಲ್ನಲ್ಲಿ, ಕೋರ್ಟ್ನಲ್ಲಿ ಇರುವ ಎಲ್ಲರನ್ನು 12:15ರ ಒಳಗಾಗಿ ಸ್ಥಳಾಂತರಿಸಬೇಕು ಎಂದು ಬೆದರಿಕೆ ಹಾಕಲಾಗಿದೆ.
ಈ ಇ-ಮೇಲ್ನ್ನು Sunniya Dasan sunniya_dasan@outlook.com ಎಂಬ ಐಡಿಯಿಂದ ಕಳುಹಿಸಲಾಗಿದೆ. ಮೇಲ್ನಲ್ಲಿರುವ ವಿಷಯಗಳಲ್ಲಿ 2021ರಲ್ಲಿ ಕೆಲವು ರಾಜಕೀಯ–ಮಾಧ್ಯಮ ಸಂಬಂಧಿತ ಆರೋಪಗಳು, ಮಾಧ್ಯಮ ನಿರ್ವಹಣೆ, ವಿವಿಧ ವ್ಯಕ್ತಿಗಳ ಹೆಸರುಗಳ ಉಲ್ಲೇಖ ಸೇರಿದಂತೆ ಆಕ್ಷೇಪಾರ್ಹ ಹಾಗೂ ಗೊಂದಲಕಾರಕ ಹೇಳಿಕೆಗಳನ್ನು ಸೇರಿಸಲಾಗಿದೆ. ಇವುಗಳ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲ.
ಬಾಂಬ್ ಬೆದರಿಕೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ನ್ಯಾಯಾಲಯದ ಆವರಣದಲ್ಲಿ ಇದ್ದ ಎಲ್ಲರನ್ನು ಸುರಕ್ಷಿತವಾಗಿ ಹೊರಗೆ ಸ್ಥಳಾಂತರಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಂದು ನಡೆಯಬೇಕಿದ್ದ ನ್ಯಾಯಾಲಯದ ಎಲ್ಲಾ ಕಲಾಪಗಳನ್ನು ಮುಂದೂಡಲಾಗಿದೆ.
ಭದ್ರತಾ ಪರಿಶೀಲನೆಗಳು ಮುಂದುವರಿದಿದ್ದು, ಇ-ಮೇಲ್ನ ಮೂಲ ಹಾಗೂ ಉದ್ದೇಶ ಪತ್ತೆಹಚ್ಚಲು ತನಿಖೆ ಕೈಗೊಳ್ಳಲಾಗಿದೆ.
