ಕಾರವಾರ:
ಶಿವರಾತ್ರಿ ಪ್ರಯುಕ್ತ ಸಮುದ್ರಸ್ನಾನಕ್ಕೆ ಇಳಿದಿದ್ದ ಬಾಲಕನೊಬ್ಬ ನೀರಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನೆ ಕಾರವಾರ ತಾಲ್ಲೂಕಿನಲ್ಲಿ ನಡೆದಿದೆ.
ಮಾಜಾಳಿ ಗಾಂವಗೇರಿಯ ನಿವಾಸಿ ಯಶ್ (17) ಮೃತ ದುರ್ದೈವಿ ಬಾಲಕ. ಕಾರವಾರ ತಾಲ್ಲೂಕಿನ ಮಾಜಾಳಿ ಸಮೀಪದ ಬಾವಳ್ ಕಡಲತೀರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಶಿವರಾತ್ರಿ ಹಿನ್ನಲೆಯಲ್ಲಿ ಸಮುದ್ರಸ್ನಾನಕ್ಕೆಂದು ಕಡಲತೀರಕ್ಕೆ ತೆರಳಿದ್ದ ಯಶ್, ಈಜಾಡುತ್ತಿರುವ ವೇಳೆ ಏಕಾಏಕಿ ನೀರಲ್ಲಿ ಮುಳುಗಿದ್ದಾನೆ.
ಸ್ಥಳೀಯರು ಹಾಗೂ ಕರಾವಳಿ ಕಾವಲುಪಡೆ ಸಿಬ್ಬಂದಿ ತಕ್ಷಣ ಮುಳುಗಿದ ಬಾಲಕನನ್ನು ರಕ್ಷಿಸಿ ಹೊರತೆಗೆದಿದ್ದಾರೆ. ಅಸ್ವಸ್ಥಗೊಂಡಿದ್ದ ಯಶ್ನ್ನು ಮಲ್ಲಾಪುರ ಪೊಲೀಸ್ ಠಾಣೆಯ ಪಿಎಸ್ಐ ಸುನೀಲ್ ಬಂಡಿವಡ್ಡರ್ ಅವರು ಪೊಲೀಸ್ ವಾಹನದಲ್ಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ಈ ಘಟನೆ ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
