ಭಟ್ಕಳ:
ಕಾಡುಪ್ರಾಣಿ ಹತ್ಯೆಯ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಭಟ್ಕಳದ ಹುರುಳಿಸಾಲದ ಮನೆಯೊಂದರ ಮೇಲೆ ದಾಳಿ ನಡೆಸಿ 21 ಕೆ.ಜಿ. ಮಾಂಸ, ಜಿಂಕೆ ಕೊಂಬು ಹಾಗೂ ಎರಡು ಏರ್ಗನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಜಾಫರ್ ಬ್ರಹ್ಮಾವರ್ ಎಂಬಾತ ಕಾಡಿನಲ್ಲಿ ಪ್ರಾಣಿಯನ್ನು ಹತ್ಯೆ ಮಾಡಿ, ಮಾಂಸವನ್ನು ಮನೆಯ ಪಕ್ಕದಲ್ಲೇ ಬೇರ್ಪಡಿಸುತ್ತಿದ್ದ. ಬಳಿಕ ಉಳಿದ ಅವಶೇಷಗಳನ್ನು ಮನೆಯ ಪಕ್ಕದಲ್ಲಿದ್ದ ಪಾಳುಬಿದ್ದ ಬಾವಿಗೆ ಎಸೆಯುತ್ತಿದ್ದ ಎನ್ನಲಾಗಿದೆ.
ಈ ಹಿನ್ನೆಲೆ ಅರಣ್ಯಾಧಿಕಾರಿಗಳು ಭಟ್ಕಳ ಪೊಲೀಸರ ಸಹಾಯದಿಂದ ಮನೆ ಒಳಗೆ ಶೋಧಕ್ಕೆ ಮುಂದಾದಾಗ ಪ್ರಾರಂಭದಲ್ಲಿ ಆರೋಪಿ ಮನೆಯವರು ಬಾಗಿಲು ತೆರೆಯಲು ವಿರೋಧ ವ್ಯಕ್ತಪಡಿಸಿದ ಘಟನೆ ನಡೆಯಿತು.
ಸುಮಾರು ಆರು ಗಂಟೆಗಳ ಕಾಲ ಅಧಿಕಾರಿಗಳು ಕಾದ ಬಳಿಕ ಆರೋಪಿ ಕುಟುಂಬಸ್ಥರು ಬಾಗಿಲು ತೆರೆದರು. ಈ ವೇಳೆ ನಡೆದ ಪರಿಶೀಲನೆಯಲ್ಲಿ ಫ್ರಿಡ್ಜ್ನಲ್ಲಿ ಸಂಗ್ರಹಿಸಿದ್ದ 21 ಕೆ.ಜಿ. ಮಾಂಸ, ಜಿಂಕೆಯ ಕೊಂಬು ಹಾಗೂ ಎರಡು ಏರ್ಗನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ, ಅಧಿಕಾರಿಗಳು ಬಾವಿಯಲ್ಲಿದ್ದ ಅವಶೇಷಗಳನ್ನು ಹೊರತೆಗೆದು ಪರಿಶೀಲಿಸಿದ್ದಾರೆ.
ಮನೆಯಲ್ಲಿ ಸಿಕ್ಕಿದ ಮಾಂಸ ಮೇಲ್ನೋಟಕ್ಕೆ ಕಾಡುಕೋಣದ ಮಾಂಸವಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಮಾಂಸದ ನಮೂನೆಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಬಂಧನಕ್ಕಾಗಿ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ಇನ್ನು ಈ ಕಾರ್ಯಾಚರಣೆಯಲ್ಲಿ ಆರ್ಎಫ್ಒ ವಿಶ್ವನಾಥ, ಡಿಆರ್ಒಎಫ್ಗಳಾದ ಮಾರುತಿ, ಸಂದೀಪ್ ಸೇರಿದಂತೆ ಧನಂಜಯ ಮೊಗೇರ, ಭಟ್ಕಳ ನಗರ ಠಾಣೆ ಸಿಪಿಐ ದಿವಾಕರ ಪಿ.ಎಂ., ಪಿಎಸ್ಐ ನವೀನ ನಾಯ್ಕ, ಗ್ರಾಮೀಣ ಠಾಣೆ ಪಿಎಸ್ಐ ಮಲ್ಲಿಕಾರ್ಜುನ ಮತ್ತಿತರರು ಪಾಲ್ಗೊಂಡಿದ್ದರು.
