ಶಿರಸಿ:
ಶಿರಸಿ–ಹಾವೇರಿ ರಸ್ತೆಯ ಕಾಮಗಾರಿಯಲ್ಲಿ ಗಂಭೀರ ಅವ್ಯವಸ್ಥೆ ಕಂಡುಬಂದಿದ್ದು, ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಕಾಮಗಾರಿ ನಡೆಯುತ್ತಿದ್ದರೂ ಅಗತ್ಯ ಸೂಚನಾ ಫಲಕಗಳು ಹಾಗೂ ಬ್ಯಾರಿಕೇಡ್ಗಳನ್ನು ಅಳವಡಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ರಸ್ತೆ ದೂಳಿನ ಪ್ರಮಾಣ ಹೆಚ್ಚಾಗಿದ್ದು, ನಿಯಮಿತವಾಗಿ ನೀರು ಸಿಂಪಡಿಸುವ ಕ್ರಮ ಕೈಗೊಳ್ಳದಿರುವುದರಿಂದ ಬೈಕ್ ಸವಾರರಿಗೆ ಪ್ರಯಾಣವೇ ಕಷ್ಟಕರವಾಗಿದೆ. ಬಸ್ ಪ್ರಯಾಣಿಕರು ಸಹ ಧೂಳಿನ ತೊಂದರೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಾರ್ಗ ಸೂಚನಾ ಫಲಕಗಳ ಕೊರತೆಯಿಂದಾಗಿ ಪ್ರತಿನಿತ್ಯ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಫೆಬ್ರವರಿ 24ರಿಂದ ಶಿರಸಿ ಜಾತ್ರೆ ಆರಂಭವಾಗಲಿದ್ದು, ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಅಪಘಾತಗಳ ಸಂಖ್ಯೆ ಹೆಚ್ಚುವ ಭೀತಿ ಎದುರಾಗಿದೆ.
ಇದಲ್ಲದೆ, ದನಗನಹಳ್ಳಿ ಸಮೀಪ ರಸ್ತೆ ಅಡ್ಡವಾಗಿ ತೆಗೆದಿರುವ ಕಾಲುವೆಗೆ ಬೈಕ್ ಸವಾರೊಬ್ಬರು ಬಿದ್ದು ತಲೆಗೆ ತೀವ್ರ ಗಾಯಗೊಂಡಿರುವ ಘಟನೆ ನಡೆದಿದೆ. ಗಾಯಗೊಂಡವರು ಬೋರನಗುಡ್ಡ ಗ್ರಾಮದವರು ಎಂದು ತಿಳಿದು ಬಂದಿದೆ.
ಸ್ಥಳೀಯರು ಸಂಬಂಧಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
