ಶಿರಸಿ:
ನಾಡಿನ ಶಕ್ತಿ ಪೀಠಗಳಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಬ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆತಿದೆ. ಇಂದು ಬೆಳಿಗ್ಗೆ ನಗರದ ಮಾರಿಕಾಂಬ ದೇವಸ್ಥಾನದಿಂದ ದೇವಿಯ ಮೂರ್ತಿಯನ್ನ ರಥದಲ್ಲಿ ಅದ್ದೂರಿಯಾಗಿ ಮೆರವಣಿಗೆ ಮೂಲಕ ಗದ್ದುಗೆಗೆ ತರಲಾಯಿತು. ರಾಜ್ಯದ ಮೂಲೆ ಮೂಲೆಗಳಿಂದ ಬಂದ ಸಹಸ್ರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದು ಭಕ್ತರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸವೇ ಪಡಬೇಕಾಯಿತು.
ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವಕ್ಕೆ ನಿನ್ನೆಯಿಂದ ಪ್ರಾರಂಭವಾಗಿದ್ದು ಇಂದು ಬೆಳಿಗ್ಗೆ ದೇವಿಯ ಮೂರ್ತಿಯನ್ನ ಮಾರಿಕಾಂಬ ದೇವಸ್ಥಾನದಿಂದ ರಥದ ಮೂಲಕ ಮೆರವಣಿಗೆಯಲ್ಲಿ ನಗರದ ಬಸ್ ನಿಲ್ದಾಣದ ಬಳಿ ಇರುವ ಗದ್ದುಗೆಗೆ ತರಲಾಯಿತು. ರಥವನ್ನ ದೇವಸ್ಥಾನದಿಂದ ತರುವಾಗ ವಿವಿಧ ಕಲಾತಂಡಗಳು, ವಾದ್ಯಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಇನ್ನಷ್ಟು ರಂಗು ಹೆಚ್ಚಿಸಿದವು. ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ ಸಾವಿರಾರು ಭಕ್ತರು ಪಾಲ್ಗೊಂಡು ದೇವಿ ದರ್ಶನ ಪಡೆದರು. ಅಲ್ಲದೇ ದೇವಿಗೆ ಹರಕೆಗಾಗಿ ತಂದಂತಹ ಕೋಳಿಗಳನ್ನ ಬಾಳೆಹಣ್ಣನ್ನ ದೇವಿಗೆ ಅರ್ಪಿಸಿದರು.
