ದಾಂಡೇಲಿ :
ಹೋಳಿ ಹಬ್ಬದ ನಿಮಿತ್ತವಾಗಿ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಶಾಂತಿಪಾಲನಾ ಸಭೆಯನ್ನು ಶನಿವಾರ ಹಮ್ಮಿಕೊಳ್ಳಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಾಂಡೇಲಿ ಗ್ರಾಮೀಣ ಠಾಣೆಯ ಪಿಎಸ್ಐ ಶಿವಾನಂದ ನಾವದಗಿ ಮತ್ತು ನಗರ ಠಾಣೆಯ ಪಿಎಸ್ಐ ಅಮೀನ್ ಅತ್ತಾರ ಅವರು ಹೋಳಿ ಹಬ್ಬವನ್ನು ಶಾಂತಿಯುತವಾಗಿ ಪರಸ್ಪರ ಸೌಹಾರ್ದತೆಯಿಂದ ಆಚರಿಸಬೇಕು. ಕಾಮದಹನ ಕಾರ್ಯಕ್ರಮವನ್ನು ನಿಗದಿತ ಸ್ಥಳದಲ್ಲಿ ನ ರಾತ್ರಿ 11 ಗಂಟೆಯೊಳಗೆ ಮುಕ್ತಾಯಗೊಳಿಸಬೇಕು. ಕಾಮದಹನ ಸಮಯದಲ್ಲಿ ಇತರೆ ಕೋಮಿನ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಬಣ್ಣದೋಕುಳಿ ಆಡಲು ರಾಸಾಯನಿಕ ಮಿಶ್ರಿತ ಬಣ್ಣವನ್ನು ಉಪಯೋಗಿಸಬಾರದು ಹಾಗೂ ಬಣ್ಣದೋಕುಳಿಯನ್ನು ಮಧ್ಯಾಹ್ನ 12:00 ಗಂಟೆಯೊಳಗೆ ಮುಕ್ತಾಯಗೊಳಿಸಬೇಕು. ಬಣ್ಣವನ್ನು ಹೆಣ್ಣು ಮಕ್ಕಳು ಹಾಗೂ ಅನ್ಯಕೋಮಿನವರ ಮೇಲೆ ಎರಚಬಾರದು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಹೋಳಿ ಹಬ್ಬವನ್ನು ಶಾಂತಿ ಸೌಹಾರ್ದತೆಯ ಹಬ್ಬವನ್ನಾಗಿ ಆಚರಿಸಬೇಕೆಂದು ಕರೆ ನೀಡಿ, ಯಾವುದೇ ಸಂದರ್ಭದಲ್ಲಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಹೇಳಿದರು.
ಸಭೆಯಲ್ಲಿ ಅಂಬೇವಾಡಿ ಗ್ರಾ.ಪಂ ನಿಕಟಪೂರ್ವ ಸದಸ್ಯ ವಸಂತ ಗಾವಡೆ, ನಗರ ಸಭೆಯ ಮಾಜಿ ಅಧ್ಯಕ್ಷ ಗೋವಿಂದ ಮೆಲಗೇರಿ, ಸಮಾಜ ಸೇವಕ ಚನ್ನಬಸಪ್ಪ ಮುರಗೋಡ, ವೆಸ್ಟ್ ಕೋಸ್ಟ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ, ಪತ್ರಕರ್ತ ಸಂದೇಶ್ ಎಸ್.ಜೈನ್ ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸಭೆಯಲ್ಲಿ ನಗರದ ಹಾಗೂ ಗ್ರಾಮೀಣ ಭಾಗದ ಹೋಳಿ ಆಚರಣೆ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
