ಕಾರವಾರ:
ಇಲ್ಲಿನ ಜಿಲ್ಲಾಪಂಚಾಯಿತಿ ಕಚೇರಿಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣೆ ಸಮಿತಿ (ಕೆಡಿಪಿ) ಸಭೆಯಲ್ಲಿ ಉಸ್ತುವಾರಿ ಸಚಿವರೊಂದಿಗೆ ನಡೆದ ತೀವ್ರ ವಾಗ್ವಾದದ ಹಿನ್ನೆಲೆಯಲ್ಲಿ ಕಾರವಾರ–ಅಂಕೋಲಾ ಶಾಸಕ ಸತೀಶ್ ಸೈಲ್ ಸಭೆಯಿಂದ ಎದ್ದು ಹೊರನಡೆದ ಘಟನೆ ನಡೆದಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಮೆಡಿಸಿನ್ಗಳ ಕೊರತೆ ಇದೆ ಎಂಬ ವಿಚಾರವನ್ನು ಶಾಸಕ ಸೈಲ್ ಸಭೆಯಲ್ಲಿ ಪ್ರಸ್ತಾಪಿಸಿದರು. ಆದರೆ ಅಧಿಕಾರಿಗಳು “ಮೆಡಿಸಿನ್ ಕೊರತೆ ಇಲ್ಲ” ಎಂದು ಮಾಹಿತಿ ನೀಡಿದಾಗ ಶಾಸಕ ಸೈಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ವೈದ್ಯರೇ ಇಲ್ಲದಿದ್ದರೆ ಮೆಡಿಸಿನ್ ಯಾರು ಕೊಡುತ್ತಾರೆ?” ಎಂದು ಪ್ರಶ್ನಿಸಿದ ಅವರು, ಜನರು ಆಸ್ಪತ್ರೆಗಳ ಸಮಸ್ಯೆಗಳ ಬಗ್ಗೆ ನಮ್ಮನ್ನೇ ಕೇಳುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.
ಈ ವೇಳೆ ಉಸ್ತುವಾರಿ ಸಚಿವ ಮಂಕಾಳ ವೈದ್ಯ, “ವೈದ್ಯರ ಕೊರತೆ ಇದ್ದರೆ ನೀವು ತರಬೇಕು” ಎಂದು ಹೇಳಿದ ಮಾತು ಶಾಸಕ ಸೈಲ್ಗೆ ಕೋಪ ತರಿಸಿತು. “ಹೇಳಿದ್ದನ್ನೆಲ್ಲಾ ಕೇಳಿಕೊಂಡು ಹೋಗಲು ನಾವೇನು ಅಂಗೂಟಾ ಛಾಪ್ (ಹೆಬ್ಬೆಟ್ಟು ಗಿರಾಕಿ) ಅಲ್ಲ. ಈ ರೀತಿಯ ಸಭೆ ಮಾಡಲು ನಾನು ಇಲ್ಲಿಗೆ ಬಂದಿಲ್ಲ” ಎಂದು ಶಾಸಕ ಸೈಲ್ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕು ಮಟ್ಟದ ವಿಚಾರಗಳನ್ನು ಜಿಲ್ಲಾಮಟ್ಟದ ಕೆಡಿಪಿ ಸಭೆಯಲ್ಲಿ ಚರ್ಚೆ ಮಾಡಬಾರದು ಎಂದರೆ ನಾನು ಇಲ್ಲಿ ಕೂತಿರಲ್ಲ ಎಂದು ಹೇಳಿದ ಶಾಸಕ ಸೈಲ್, ಸಭೆಯಲ್ಲೇ ಅಸಮಾಧಾನ ವ್ಯಕ್ತಪಡಿಸಿ ಹೊರನಡೆದರು. ಈ ಘಟನೆ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣಕ್ಕೆ ಕಾರಣವಾಯಿತು.
