ಭಟ್ಕಳ:
ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರನ್ನು ತಡೆದು ಸುಲಿಗೆ ಮಾಡುವ ಉದ್ದೇಶದಿಂದ ಸಿದ್ಧತೆ ಮಾಡಿಕೊಂಡಿದ್ದ ಯುವಕನನ್ನು ಭಟ್ಕಳ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಅಬ್ದುಲ ಸಲಾಂ (23) ಎಂದು ಗುರುತಿಸಲಾಗಿದೆ. ಈತ ಭಟ್ಕಳದ ನಾಗರಕಟ್ಟೆ ಹತ್ತಿರದ ಹುರುಳಿಸಾಲ ನಿವಾಸಿಯಾಗಿದ್ದು ವಾಟರ್ ಸರ್ವಿಸ್ ಕೆಲಸ ಮಾಡುತ್ತಿದ್ದ.
ಮಾರ್ಚ್ 6 ರಂದು ಸಂಜೆ ಸುಮಾರು 6.45 ಗಂಟೆಗೆ ಭಟ್ಕಳ-ಸಾಗರ ರಾಜ್ಯ ಹೆದ್ದಾರಿಯ ಗುಳ್ಳೆ ಕ್ರಾಸ್ ಹತ್ತಿರ ಸ್ವಿಫ್ಟ್ ಕಾರು (KA-47/A-5785) ಯಲ್ಲಿ ಸುಲಿಗೆಗೆ ಅಗತ್ಯವಿರುವ ಚಾಕು, ಮಂಕಿ ಕ್ಯಾಪ್, ಪಕ್ಕಡ್, ಖಾರದ ಪುಡಿ, ಟಾರ್ಚ್ ಮೊದಲಾದ ವಸ್ತುಗಳನ್ನು ಇಟ್ಟುಕೊಂಡು ಸಂಚು ರೂಪಿಸಿ ಕಾದು ಕುಳಿತಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು.
ತಕ್ಷಣ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಕಾರಿನಲ್ಲಿದ್ದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ರಾತ್ರಿ ವೇಳೆ ಹೆದ್ದಾರಿಯಲ್ಲಿ ಒಬ್ಬಂಟಿಯಾಗಿ ಸಂಚರಿಸುವವರನ್ನು ತಡೆದು ಹಣ ಅಥವಾ ಬೆಲೆಬಾಳುವ ವಸ್ತುಗಳನ್ನು ದೋಚುವ ಉದ್ದೇಶ ಹೊಂದಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
