ಭಟ್ಕಳ:
ಎರಡು ವರ್ಷಗಳ ಬಳಿಕ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಭಟ್ಕಳದಲ್ಲಿ ನಡೆದ ‘ಹಿಂದೂ ಸಂಗಮ’ ಕಾರ್ಯಕ್ರಮದಲ್ಲಿ ಭಾಷಣ ಮಾಡಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಹಿಂದೂ ಸಮುದಾಯದಲ್ಲಿ ಐಕ್ಯತೆ ಅಗತ್ಯವಿದೆ ಎಂದು ಅವರು ಕರೆ ನೀಡಿದರು.
ನಗರದ ಹಳೆ ಬಸ್ ನಿಲ್ದಾಣದ ಸಮೀಪ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಜಾತಿಗಿಂತ ವ್ಯಕ್ತಿಯ ಯೋಗ್ಯತೆ ಮುಖ್ಯ ಎಂದು ಹೇಳಿದರು. ಇತಿಹಾಸವನ್ನು ಗಮನಿಸಿದರೆ ಅನೇಕ ಮಹಾನ್ ಋಷಿಗಳು ಬ್ರಾಹ್ಮಣರಲ್ಲ ಎಂದು ಅವರು ಉಲ್ಲೇಖಿಸಿದರು. ವಾಲ್ಮೀಕಿ ಹಾಗೂ ವಿಶ್ವಾಮಿತ್ರರನ್ನು ಉದಾಹರಣೆಯಾಗಿ ನೀಡಿ, ದೇಶದ ಪರಂಪರೆಯಲ್ಲಿ ಸಾಮರ್ಥ್ಯಕ್ಕೆ ಮಹತ್ವವಿತ್ತು ಎಂದು ತಿಳಿಸಿದರು.
ಜಾತ್ಯತೀತತೆ ಕುರಿತು ಮಾತನಾಡಿದ ಅವರು, ಭಾರತವು ವಿವಿಧ ಧರ್ಮಗಳಿಗೆ ಅವಕಾಶ ನೀಡಿದ ದೇಶವಾಗಿದೆ ಎಂದು ಹೇಳಿದರು. ಬೇರೆ ರಾಷ್ಟ್ರಗಳಿಂದ ಬಂದ ಸಮುದಾಯಗಳಿಗೆ ಮಸೀದಿ ಹಾಗೂ ಚರ್ಚ್ ನಿರ್ಮಿಸಲು ಅವಕಾಶ ನೀಡಿರುವುದು ಭಾರತದ ಸಹಿಷ್ಣುತೆಯನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಭಾಷಣದಲ್ಲಿ ಅವರು ಹಿಂದೂ ಸಮುದಾಯದಲ್ಲಿ ಏಕತೆ ಅಗತ್ಯವಿದೆ ಎಂದು ಒತ್ತಿಹೇಳಿದರು. ಇತಿಹಾಸದಲ್ಲಿ ಕೆಲವು ಒಳಗಿನ ದ್ರೋಹಗಳೇ ದೇಶಕ್ಕೆ ಹಾನಿ ಮಾಡಿವೆ ಎಂದು ಹೇಳಿ, ಹಿಂದೂಗಳು ಒಂದಾಗಿ ನಿಲ್ಲಬೇಕೆಂದು ಕರೆ ನೀಡಿದರು.
ಆರ್ಎಸ್ಎಸ್ ಸಂಘಟನೆ ಕುರಿತು ಮಾತನಾಡಿದ ಅವರು, ಅದನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಭಾರತೀಯ ಸಂಸ್ಕೃತಿ ಹಾಗೂ ಪರಂಪರೆ ವಿಶ್ವದ ಹಲವು ದೇಶಗಳಲ್ಲಿ ಗೌರವ ಪಡೆಯುತ್ತಿದೆ ಎಂದು ಕೂಡ ಹೇಳಿದರು.ಇಂದು ಜಗತ್ತಿನ ಅನೇಕ ಭಾಗಗಳಲ್ಲಿ ಭಾರತೀಯ ಹಬ್ಬಗಳನ್ನು ಆಚರಿಸಲಾಗುತ್ತಿದೆ. ಆಫ್ರಿಕಾದಲ್ಲಿಯೂ ಗಣೇಶ ಹಬ್ಬವನ್ನು ಉತ್ಸಾಹದಿಂದ ಆಚರಿಸುತ್ತಾರೆ ಎಂದು ಅವರು ಉದಾಹರಿಸಿದರು. ಭಾರತೀಯ ಸಂಸ್ಕೃತಿಯ ಪ್ರಭಾವ ಜಗತ್ತಿನಾದ್ಯಂತ ಹೆಚ್ಚುತ್ತಿದೆ ಎಂದು ಹೇಳಿದರು.
ಇನ್ನೊಂದು ಕಡೆ, ಶಿಕ್ಷಣ ವ್ಯವಸ್ಥೆ ಕೇವಲ ಹಣ ಸಂಪಾದನೆಗೆ ಸೀಮಿತವಾಗುತ್ತಿರುವುದಾಗಿ ಅವರು ವಿಷಾದ ವ್ಯಕ್ತಪಡಿಸಿದರು. ಜೀವನದಲ್ಲಿ ಸಂಸ್ಕಾರ ಮತ್ತು ಮೌಲ್ಯಗಳಿಗೆ ಮಹತ್ವ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಸುಮಾರು 3,000ಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭದ್ರತಾ ದೃಷ್ಟಿಯಿಂದ ಭಟ್ಕಳ ನಗರದಲ್ಲಿ ಪೊಲೀಸ್ ಬಂದೋಬಸ್ತ್ ಕಟ್ಟು ನಿಟ್ಟಾಗಿ ಮಾಡಲಾಗಿತ್ತು. ಕೃಷ್ಣ ನಾಯ್ಕ್ ಅಸರಕೇರಿ ಸ್ವಾಗತಿಸಿದರು, ಶ್ರೀಧರ್ ನಾಯ್ಕ್ ಆಸರಿಕೆರಿ ಪ್ರಾಸ್ತಾವಿಕ ನುಡಿ ಮಾತನಾಡಿದರು.ಬಂಟವಾಳ್ ದ ಸ್ವಾಮೀಜಿ ದಿವ್ಯ ಸಾನ್ನಿದ್ಯ ವಹಿಸಿದರು.ರಾಮದಾಸ ಪ್ರಭು ವೇದಿಕೆಯಲ್ಲಿದ್ದು ಸಮ್ಮೇಳನ ದ ಗೌರವಾಧ್ಯಕ್ಷ ತೆ ವಹಿಸಿದ್ದರು.
