ದಾಂಡೇಲಿ :
ಇಡೀ ಸಂಸಾರದ ನಿರ್ವಹಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮಹಿಳೆಯರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕೆಂದು ದಾಂಡೇಲಿಯ ಲಯನ್ಸ್ ಕ್ಲಬ್ ಅಧ್ಯಕ್ಷೆ ಡಾ.ಗೌರಿ ಶೇಖರ ಹಂಚಿನಾಳಮಠ ಅವರು ಕರೆ ನೀಡಿದರು.
ಅವರು ಭಾನುವಾರ ನಗರದ ಅಂಬೇಡ್ಕರ್ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ನಿಮಿತ್ತವಾಗಿ ದಾಂಡೇಲಿಯ ಲಯನ್ಸ್ ಕ್ಲಬ್ ಹಾಗೂ ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ ಆಶ್ರಯದಡಿ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ತಾಯಿ ತನ್ನ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದಂತೆ, ತಮ್ಮ ಆರೋಗ್ಯ ರಕ್ಷಣೆಯ ಬಗ್ಗೆಯೂ ಮಹಿಳೆಯರು ಅಷ್ಟೇ ಕಾಳಜಿಯನ್ನು ವಹಿಸಬೇಕೆಂದು ಕರೆ ನೀಡಿ, ಮಹಿಳೆಯರು ಈ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನ್ಯಾಯಾಧೀಶರಾಗಿ ಆಯ್ಕೆಯಾದ ಪದ್ಮಾವತಿ ಮಾದಿಗ ಅವರು ಮಹಿಳೆಯರು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬಂದ ಪರಿಣಾಮವಾಗಿ ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಸಾಧನೆಗಳ ಮೇಲೆ ಸಾಧನೆ ಮಾಡಲು ಸಾಧ್ಯವಾಗಿದೆ. ಶಿಕ್ಷಣವಂತ ಸಮಾಜ ನಿರ್ಮಾಣವಾದರೆ ಮಾತ್ರ ರಾಷ್ಟ್ರದ ಅಭಿವೃದ್ಧಿ ಸುಲಲಿತವಾಗಿ ನಡೆಯಲು ಸಾಧ್ಯವಿದೆ. ಇಂದು ಮಹಿಳೆಯರು ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ವೈಜ್ಞಾನಿಕ ಹೀಗೆ ನಾನಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡುವ ಮೂಲಕ ಮಹಿಳಾ ಶಕ್ತಿಯನ್ನು ಸಾದರಪಡಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಗರಸಭೆಯ ಮಾಜಿ ಅಧ್ಯಕ್ಷೆ ಯಾಸ್ಮಿನ್ ಕಿತ್ತೂರ್, ನಗರಸಭೆಯ ಮಾಜಿ ಉಪಾಧ್ಯಕ್ಷೆ ಶಾರದಾ ಪರಶುರಾಮ, ಶಿಕ್ಷಕಿ ಸರೋಜಿನಿ ವೆರ್ಣೇಕರ, ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ತಿನ ತಾಲೂಕು ಅಧ್ಯಕ್ಷೆ ಪ್ರಮೀಳಾ ಮಾನೆ ಭಾಗವಹಿಸಿ ಮಹಿಳಾ ದಿನಾಚರಣೆಯ ಶುಭವನ್ನು ಕೋರಿ, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕೆಂದು ಕರೆ ನೀಡಿದರು.
ಶಿಬಿರದ ವೈದ್ಯರುಗಳಾದ ಡಾ.ಕೀರ್ತಿ ಸಾಳುಂಕೆ ಮತ್ತು ಡಾ.ನಸ್ರೀನ್ ಬೇಗಂ ಅವರು ಮಹಿಳೆಯರ ಆರೋಗ್ಯ ಸುರಕ್ಷತೆಯ ಕುರಿತಂತೆ ಮಾತನಾಡಿದರು.
ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ತಿನ ಬೆಳಗಾವಿ ವಿಭಾಗದ ಅಧ್ಯಕ್ಷೆ ರೇಣುಕಾ ಬಂದಂ ಅವರು ಈ ಕಾರ್ಯಕ್ರಮದ ಆಯೋಜನೆಯ ಉದ್ದೇಶವನ್ನು ವಿವರಿಸಿ, ಲಯನ್ಸ್ ಕ್ಲಬ್ ಹಾಗೂ ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ನ್ಯಾಯಾಧೀಶರಾಗಿ ಆಯ್ಕೆಯಾದ ಪದ್ಮಾವತಿ ಮಾದಿಗ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ಖಜಾಂಚಿ ಸುಮಂಗಲಾ ಚಿಕ್ಕಮಠ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಲಯನ್ಸ್ ಕ್ಲಬ್ ಕಾರ್ಯದರ್ಶಿ ರುಬಿನಾ ಕೌಸರ್ ಇಮ್ತಿಯಾಜ್ ಅತ್ತಾರ ವಂದಿಸಿದರು.
