ಅಂಕೋಲಾ:
ಉತ್ತರಕನ್ನಡ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿರುವ ಗೃಹ ಸಚಿವರ ಆಪ್ತ, ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಹತ್ಯೆ ಯತ್ನ ಪ್ರಕರಣದಲ್ಲಿ ಇದೀಗ ಶಂಕಿತ ನಾಲ್ವರು ಆರೋಪಿಗಳನ್ನ ಪೊಲೀಸರು ಸೆರೆ ಹಿಡಿದಿದ್ದಾರೆ ಎನ್ನಲಾಗಿದೆ.
ಅಂಕೋಲಾ ಪಟ್ಟಣದಲ್ಲಿ ಬೆಳಿಗ್ಗೆ ಸುಮಾರು 9:30ರ ಸುಮಾರಿಗೆ ಹೇರ್ ಕಟಿಂಗ್ಗೆ ಆಗಮಿಸಿದ್ದ ಗೋಪಾಲಕೃಷ್ಣ ನಾಯಕ ಅವರ ಮೇಲೆ ಆರು ಮಂದಿ ಹಂತಕರು ಚಾಕು ಇರಿದು ತಪ್ಪಿಸಿಕೊಳ್ಳಲು ಮುಂದಾಗಿದ್ದು, ನಾಲ್ವರು ಗೋವಾದತ್ತ ಪರಾರಿಯಾಗಲು ಮುಂದಾಗಿದ್ದರು. ಈ ವೇಳೆ ಅಲರ್ಟ್ ಆಗಿದ್ದ ಪೊಲೀಸರು ಕಾರವಾರ-ಗೋವಾ ಗಡಿ ಮಾಜಾಳಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಂಡಿದ್ದು, ನಾಲ್ವರು ದುಷ್ಕರ್ಮಿಗಳನ್ನ ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.
ಆರು ಮಂದಿ ಪೈಕಿ ನಾಲ್ಕರು ಆರೋಪಿಗಳನ್ನ ಚಿತ್ತಾಕುಲ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಕರೆದೊಯ್ದಿದ್ದಾರೆ. ತಲೆಮರೆಸಿಕೊಂಡಿರುವ ಇನ್ನೂ ಇಬ್ಬರಿಗಾಗಿ ತೀವ್ರ ಶೋಧ ಮುಂದುವರೆದಿದ್ದು, ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್.ಎಂ.ಎನ್ ವಿಶೇಷ ತಂಡಗಳನ್ನ ರಚಿಸಿ ತನಿಖೆ ಆರಂಭಿಸಿದ್ದಾರೆ.
ಬಲ್ಲ ಮೂಲಗಳ ಪ್ರಕಾರ ಬಿಹಾರ ಮೂಲದ ಆರೋಪಿಗಳಿಗೆ ಸುಪಾರಿ ನೀಡಿದ ವ್ಯಕ್ತಿ ಮುಖಂಡ ಗೋಪಾಲಕೃಷ್ಣ ನಾಯಕ ಅವರ ಫೋಟೋ ಕೊಟ್ಟು ಕಳುಹಿಸಿದ್ದರು ಎನ್ನಲಾಗಿದ್ದು, ಹ*ತ್ಯೆ ಮಾಡುವಂತೆ ಸುಪಾರಿ ನೀಡಲಾಗಿತ್ತು ಎನ್ನಲಾಗಿದೆ. ಹೀಗಾಗಿ ಆರೋಪಿಗಳು ಕಳೆದ ಮೂರ್ನಾಲ್ಕು ದಿನಗಳಿಂದ ಅಂಕೋಲಾದ ಲಾಡ್ಜ್ ಒಂದರಲ್ಲಿ ರೂಮ್ ಮಾಡಿಕೊಂಡು ಗೋಪಾಲಕೃಷ್ಣ ನಾಯಕ ಅವರ ಚಲನವಲನಗಳ ಮೇಲೆ ನಿಗಾವಹಿಸಿದ್ದರು ಎನ್ನಲಾಗಿದೆ.
ಇಂದು ಏಕಾಂಗಿಯಾಗಿ ಪಟ್ಟಣಕ್ಕೆ ಆಗಮಿಸಿದ್ದ ವೇಳೆ ಏಕಾಏಕಿ ಚಾಕು ಇರಿದು ಹತ್ಯೆಗೈಯ್ಯಲು ಆರೋಪಿಗಳು ಮುಂದಾಗಿದ್ದರು. ಆದರೆ ಅದೃಷ್ಟವಶಾತ್ ಗೋಪಾಲಕೃಷ್ಣ ನಾಯಕ ಅವರು ಬ್ಯಾಂಕಿನೊಳಗೆ ಹೊಕ್ಕು ಬಾಗಿಲು ಹಾಕಿಕೊಂಡಿದ್ದರಿಂದ ಪ್ರಾಣ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದು, ತಲೆ ಹಾಗೂ ಕತ್ತಿಗೆ ಚಾಕುವಿನಿಂದ ಗಂಭೀರ ಗಾಯಗಳಾಗಿವೆ.
ಗಂಭೀರ ಗಾಯಗೊಂಡಿದ್ದ ಗೋಪಾಲಕೃಷ್ಣ ನಾಯಕ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಹಠಾತ್ ಹ*ತ್ಯೆ ಯತ್ನ ಪ್ರಕರಣದಿಂದ ಗೋಪಾಲಕೃಷ್ಣ ನಾಯಕ ಅವರ ಅಭಿಮಾನಿಗಳು, ಬೆಂಬಲಿಗರಲ್ಲಿ ಆತಂಕ ಸೃಷ್ಟಿಯಾಗಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸದ್ಯ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದು, ಸುಪಾರಿ ನೀಡಿದವರು ಯಾರು, ಯಾವ ದ್ವೇಷಕ್ಕಾಗಿ ಹತ್ಯೆಗೆ ಯತ್ನ ನಡೆದಿದೆ ಎನ್ನುವುದು ಇನ್ನಷ್ಟೇ ತಿಳಿದುಬರಬೇಕಿದೆ.
