ಕಾರವಾರ:
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದ ಹತ್ಯೆ ಯತ್ನ ಪ್ರಕರಣದ ಕುರಿತು ಗಾಯಗೊಂಡಿರುವ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮಾರ್ಚ್ 25ರಂದು ತಮ್ಮ ಮೇಲೆ ನಡೆದ ಹತ್ಯೆ ಯತ್ನದ ಕುರಿತು ಮಾತನಾಡಿದ ಅವರು, “ಪೊಲೀಸರ ತನಿಖೆ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ತನಿಖೆಯಲ್ಲಿ ಸತ್ಯ ಹೊರಬರಲಿದೆ ಎನ್ನುವ ನಂಬಿಕೆ ಇದೆ” ಎಂದು ತಿಳಿಸಿದ್ದಾರೆ.
ಈ ಪ್ರಕರಣದ ಹಿನ್ನೆಲೆ ಕುರಿತು ವಿವರಿಸಿದ ಅವರು, ಅಂಕೋಲಾದಲ್ಲಿ ನಡೆದ ಸಹಕಾರಿ ಚುನಾವಣೆಯ ವೇಳೆ ಉದ್ಯಮಿ ಮಯೂರ್ ನಾಯಕ ಅವರೊಂದಿಗೆ ಜಗಳವಾಗಿತ್ತು. ಇದೇ ಕಾರಣದಿಂದ ಹತ್ಯೆಗೆ ಯತ್ನ ನಡೆಸಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಹತ್ಯೆಗೆ ಸುಪಾರಿ ನೀಡಿದವರ ಪರ ಕ್ಷೇತ್ರದ ಶಾಸಕ ಸತೀಶ್ ಸೈಲ್ ಇದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಕುರಿತು ಸ್ಪಷ್ಟನೆ ನೀಡಿದ ಗೋಪಾಲಕೃಷ್ಣ ನಾಯಕ, “ಸತೀಶ್ ಸೈಲ್ ಅವರೇ ಹತ್ಯೆ ಯತ್ನದ ಹಿಂದೆ ಇದ್ದಾರೆ ಎಂದು ನಾನು ಹೇಳುವುದಿಲ್ಲ. ರಾಜಕಾರಣದಲ್ಲಿ ಅವರೊಂದಿಗೆ ನನಗೆ ಭಿನ್ನಾಭಿಪ್ರಾಯಗಳಿವೆ. ಆದರೆ ಅವರು ಇಂತಹ ಕೃತ್ಯಕ್ಕೆ ಇಳಿಯುವುದಿಲ್ಲ ಎನ್ನುವ ನಂಬಿಕೆ ಇದೆ” ಎಂದು ಹೇಳಿದ್ದಾರೆ.
ರಾಜಕೀಯ ದ್ವೇಷವೇ ಈ ಘಟನೆಗೆ ಕಾರಣವಾಗಿರಬಹುದು ಎಂದು ಅಭಿಪ್ರಾಯಪಟ್ಟ ಅವರು, “ಮುಂದಿನ ಚುನಾವಣೆಯಲ್ಲಿ ಕಾರವಾರ ಕ್ಷೇತ್ರದಿಂದ ನಾನು ಸ್ಪರ್ಧಿಸುವ ವಿಚಾರದಿಂದ ಈ ಯತ್ನ ನಡೆದಿರಬಹುದು” ಎಂದು ತಿಳಿಸಿದ್ದಾರೆ.
ಹತ್ಯೆ ಯತ್ನದ ಬಗ್ಗೆ ಪೂರ್ವ ಮಾಹಿತಿ ಇರಲಿಲ್ಲ ಎಂದು ತಿಳಿಸಿದ ಅವರು, “ಇದರ ಬಗ್ಗೆ ತಿಳಿದಿದ್ದರೆ ನಾನು ಮುಂಚಿತವಾಗಿಯೇ ಪೊಲೀಸ್ ಭದ್ರತೆ ಪಡೆಯುತ್ತಿದ್ದೆ” ಎಂದಿದ್ದಾರೆ. ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
