ದಾಂಡೇಲಿ :
ನಗರ ಸಭೆ ಮತ್ತು ತಾಲೂಕಾಡಳಿತದ ಸಂಯುಕ್ತ ಆಶ್ರಯದಡಿ ನಗರದಲ್ಲಿ ಮೂರು ದಿನಗಳವರೆಗೆ ನಡೆಯಲಿರುವ ಸ್ವಚ್ಛತಾ ಅಭಿಯಾನಕ್ಕೆ ಮಾರ್ಚ್.31ರಂದು ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ನಗರದ ಕೆ.ಸಿ.ವೃತ್ತದಲ್ಲಿ ಶಾಸಕ ಆರ್.ವಿ.ದೇಶಪಾಂಡೆಯವರು ಚಾಲನೆಯನ್ನು ನೀಡಲಿದ್ದಾರೆ ಎಂದು ತಹಶೀಲ್ದಾರ್ ಶೈಲೇಶ ಪರಮಾನಂದ ಮತ್ತು ಪೌರಾಯುಕ್ತ ವಿವೇಕ ಬನ್ನೆ ಅವರು ತಿಳಿಸಿದ್ದಾರೆ.
ಅವರು ಭಾನುವಾರ ಮಾಧ್ಯಮಕ್ಕೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ. ಮೂರು ದಿನಗಳವರೆಗೆ ನಡೆಯಲಿರುವ ಈ ಸ್ವಚ್ಛತಾ ಅಭಿಯಾನವು ಬೆಳಿಗ್ಗೆ 7.00 ಗಂಟೆಯಿಂದ ಆರಂಭವಾಗಿ ಸಂಜೆ 7:00 ವರೆಗೆ ನಡೆಯಲಿದೆ. ಮಾರ್ಚ್.31ರಂದು ಕೆ.ಸಿ.ವೃತ್ತದಲ್ಲಿ ಆರಂಭಗೊಂಡು ಕುಳಗಿ ರಸ್ತೆಯವರೆಗೆ ನಡೆಯಲಿದೆ. ಏ.01ರಂದು ಪಟೇಲ್ ವೃತ್ತದಿಂದ ಆರಂಭಗೊಂಡು ಹಳೆ ದಾಂಡೇಲಿಯವರೆಗೆ ನಡೆಯಲಿದೆ. ಏ.02ರಂದು ಹಳೆದಾಂಡೇಲಿಯಿಂದ ಪ್ರಾರಂಭಗೊಂದು ಬೈಲುಪಾರು ಮೂಲಕ ಕುಳಗಿ ರಸ್ತೆಯವರೆಗೆ ನಡೆಯಲಿದೆ.
ಈ ಮೂರು ದಿನಗಳ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ನಗರ ಸಭೆಯ ಮಾಜಿ ಅಧ್ಯಕ್ಷರು, ಮಾಜಿ ಉಪಾಧ್ಯಕ್ಷರು, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರು, ಮಾಜಿ ನಗರಸಭಾ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು, ಎಲ್ಲ ಸಂಘ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು, ರೋಟರಿ ಕ್ಲಬ್ ಹಾಗೂ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಮತ್ತು ಸದಸ್ಯರು, ವಕೀಲರ ಸಂಘ, ಪ್ರವಾಸೋದ್ಯಮಿಗಳ ಸಂಘ , ಹೋಂ ಸ್ಟೇ & ರೆಸಾರ್ಟ್ ಮಾಲಕರ ಸಂಘ, ವರ್ತಕರ ಸಂಘ, ಬೀದಿ ಬದಿ ವ್ಯಾಪಾರಸ್ಥರ ಸಂಘ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು, ಶಾಲಾ – ಕಾಲೇಜಿನ ಶಿಕ್ಷಕರು, ಪ್ರಾಚಾರ್ಯರು, ಬೋಧಕ ವೃಂದ, ಬೋಧಕೇತರ ಸಿಬ್ಬಂದಿಗಳು, ಎನ್.ಎಸ್.ಎಸ್, ಎಸ್.ಸಿ.ಸಿ, ಗೃಹಕ ರಕ್ಷಕ ದಳ, ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದಾಂಡೇಲಿ ನಗರವನ್ನು ಸ್ವಚ್ಛ ನಗರವನ್ನಾಗಿಸಲು ಕೈಜೋಡಿಸುವಂತೆ ವಿನಂತಿಸಿದ್ದಾರೆ.
