ದಾಂಡೇಲಿ :
ಸಣ್ಣ ಉದ್ಯಮಿಗಳನ್ನು ಮತ್ತು ಗೃಹ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ಹಾಗೂ ಬೆಂಬಲಿಸುವ ನಿಟ್ಟಿನಲ್ಲಿ ದಾಂಡೇಲಿಯ ರೋಟರಿ ಕ್ಲಬ್, ಕುಂದಾಪುರದ ಬೆನಕ ಇವೆಂಟ್ಸ್ ಮತ್ತು ಅಂಕೋಲಾದ ಶ್ರೀ ಗುರು ರಾಘವೇಂದ್ರ ಇವೆಂಟ್ಸ್ ಇವರ ಸಹಯೋಗದಲ್ಲಿ ದಾಂಡೇಲಿಯ ಕುಳಗಿ ರಸ್ತೆಯಲ್ಲಿರುವ ಶ್ರೀ ವಿದ್ಯಾಧಿರಾಜ ಸಭಾಭವನದಲ್ಲಿ ಏ.03 ರಿಂದ ಏ.05ರವರೆಗೆ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9:00 ಗಂಟೆಯವರೆಗೆ ಒಟ್ಟು ಮೂರು ದಿನಗಳ ಬೃಹತ್ ಆಹಾರ ಮೇಳ ಮತ್ತು ಸ್ವದೇಶಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಅಶುತೋಷ್ ಕುಮಾರ್ ರಾಯ್, ರೋಟರಿ ಕ್ಲಬ್ ಪ್ರಮುಖ ಎಸ್.ಪ್ರಕಾಶ ಶೆಟ್ಟಿ ಮತ್ತು ಮೇಳದ ಸಂಘಟಕ ಗಣೇಶ ಶೆಟ್ಟಿ ತಿಳಿಸಿದ್ದಾರೆ.
ಅವರು ಬುಧವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮೇಳದ ಬಗ್ಗೆ ಮಾಹಿತಿ ನೀಡಿದರು. ಮೂರು ದಿನಗಳ ಈ ಬೃಹತ್ ಆಹಾರ ಮೇಳ ಮತ್ತು ಸ್ವದೇಶಿ ಮೇಳದಲ್ಲಿ 70ಕ್ಕೂ ಅಧಿಕ ಮಳಿಗೆಗಳು ಭಾಗವಹಿಸಲಿವೆ. ವಿಶೇಷವಾಗಿ ಇಳಕಲ್ ಹಾಗೂ ಖಾದಿ ಸೀರೆಗಳು, ಅಲಂಕಾರಿಕ ವಸ್ತುಗಳು, ಗೃಹಬಳಕೆಯ ವಸ್ತುಗಳು, ಬಿದಿರಿನ ಉತ್ಪನ್ನಗಳು, ದೀಪಾಲಂಕೃತ ಮಣ್ಣಿನ ಮಡಕೆಗಳು, ಹಲಸಿನ ಹಣ್ಣಿನ ಜಾಮ್, ಹಲಸಿನ ಉಪ್ಪಿನಕಾಯಿ, ಹುಣಸೆ ಹುಳಿ ಚಟ್ನಿ, ಅಪ್ಪೆ ಮಿಡಿ ಚಟ್ನಿ, ಹಲಸಿನ ಸ್ವಾಪ್ಟಿ, ನ್ಯಾಚುರಲ್ ಐಸ್ ಕ್ರೀಮ್, ಮಣ್ಣಿನ ಆಭರಣಗಳು, ಉತ್ತರ ಭಾರತದ ಆಹಾರಗಳು, ಗೋವಾದ ಹೆಸರಾಂತ ಚಾಕಲೇಟ್, ಸ್ಟ್ರಾಬೆರಿ ತಿನಿಸುಗಳು ಮಾವಿನ ಹಣ್ಣಿನ ಸ್ವೀಟ್ ಉಪ್ಪಿನಕಾಯಿ, ಸುಂದರ ಶಿಲಾಮೂರ್ತಿಗಳು, ಬ್ಯೂಟಿ ಪ್ರಾಡಕ್ಟ್ & ಬ್ಯಾಗ್, ಸದಭಿರುಚಿಯ ಪುಸ್ತಕಗಳ ಮಳಿಗೆಗಳು ಎಲ್ಲರ ಗಮನ ಸೆಳೆಯಲಿದೆ. ಈ ಮೇಳದಲ್ಲಿ ಹಲಸಿನ ಹಣ್ಣಿನ ಜಿಲೇಬಿ ಹಾಗೂ ಹೋಳಿಗೆ ಮತ್ತು ಇನ್ನಿತರ ತಿಂಡಿ ತಿನಿಸುಗಳನ್ನು ಲೈವ್ ಆಗಿ ತಯಾರು ಮಾಡಿ ಕೊಡಲಾಗುತ್ತದೆ. ಈ ಮೇಳದಲ್ಲಿ ಹಲಸು, ಮಾವಿನ ಗಿಡಗಳು, ಹೂವಿನ ಗಿಡಗಳು, ತರಕಾರಿ ಬೀಜಗಳು ಹಾಗೂ ಅನೇಕ ಗಿಡಗಳು ಕೂಡ ದೊರೆಯಲಿದೆ.
ಈಗಾಗಲೇ ಕಳೆದ ಕೆಲವು ವರ್ಷಗಳಿಂದ ಹಲಸು ಮೇಳ, ಸ್ವದೇಶಿ ಮೇಳ ಸೇರಿದಂತೆ ಅನೇಕ ಕಡೆ ಈ ರೀತಿಯ ಮೇಳಗಳನ್ನು ಆಯೋಜಿಸುವ ಮೂಲಕ ಸ್ವ ಉದ್ಯೋಗಿಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ಅವರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಯನ್ನು ಒದಗಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದೇವೆ. ಸ್ವದೇಶಿ ವಸ್ತುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ಮೇಳ ಪರಿಣಾಮಕಾರಿಯಾಗಿದೆ. ಮೂರು ದಿನಗಳ ಈ ಮೇಳದಲ್ಲಿ 70 ಕ್ಕಿಂತ ಅಧಿಕ ಮಳಿಗೆಗಳು ಭಾಗವಹಿಸಲಿದ್ದು, ಯಶಸ್ವಿಯಾಗಿ ಸ್ವಾವಲಂಬನೆಯ ಜೀವನ ನಡೆಸುತ್ತಿರುವ ಇಂತಹ ಸ್ವ ಉದ್ಯೋಗಿಗಳನ್ನು ನಾವು ನೀವೆಲ್ಲರೂ ಸೇರಿ ಬೆಂಬಲಿಸಿ, ಬೆಳೆಸುವುದರ ಜೊತೆಗೆ ಮತ್ತಷ್ಟು, ಮಗದಷ್ಟು ಸ್ವದೇಶಿ ಉತ್ಪನ್ನಗಳು ಮಾರುಕಟ್ಟೆಗೆ ಬರುವಂತಾಗಬೇಕೆಂಬುವುದೇ ಈ ಮೇಳದ ಮೂಲ ಆಶಯವಾಗಿದೆ. ಈ ಮೇಳವನ್ನು ನೋಡಲು ಮತ್ತು ಮೇಳದಲ್ಲಿರುವ ವಿವಿಧ ವೈಶಿಷ್ಟ್ಯಪೂರ್ಣ ಹಾಗೂ ಆರೋಗ್ಯಪೂರ್ಣ ಮತ್ತು ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳನ್ನು ಖರೀದಿಸಲು ಹಾಗೂ ಮೇಳದ ಸವಿಯನ್ನು ಅನುಭವಿಸಲು ದಾಂಡೇಲಿ ಹಾಗೂ ದಾಂಡೇಲಿಯ ಸುತ್ತಮುತ್ತಲ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಮತ್ತೆ ಮತ್ತೆ ಇಂತಹ ಮೇಳ ಇಲ್ಲಿಗೆ ಬರುವಂತಾಗಲು ತುಂಬು ಹೃದಯದ ಸಹಕಾರವನ್ನು ನೀಡುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪ್ರಧಾನ ಕಾರ್ಯದರ್ಶಿ ಮಿಥುನ್ ನಾಯಕ, ಪ್ರಮುಖರಾದ ಎಸ್.ಸೋಮಕುಮಾರ್, ಸುಧಾಕರ ಶೆಟ್ಟಿ ಮತ್ತು ಅಭಿಷೇಕ್ ಕನ್ನಾಡಿ ಉಪಸ್ಥಿತರಿದ್ದರು.
