ದಾಂಡೇಲಿ: ದಾಂಡೇಲಿ ನಗರಸಭೆಯ ಘನತ್ಯಾಜ್ಯ ನಿರ್ವಹಣೆಯ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ, ವೇತನ ಹಣದ ಭ್ರಷ್ಠಾಚಾರ ಹಾಗೂ ಸ್ವಚ್ಛತಾ ವಾಹನ ಸೇರಿದಂತೆ ಸಲಕರಣೆಗಳ ಖರೀದಿಯ ಒಟ್ಟು ಪ್ರಕ್ರಿಯೆಯನ್ನು ತನಿಖೆಗೊಳಪಡಿಸುವಂತೆ ಒತ್ತಾಯಿಸಿ ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯಡಿ. ಸ್ಯಾಮಸನ್ ಶಾಸಕ ಆರ್.ವಿ. ದೇಶಪಾಂಡೆಯವರಿಗೆ ಮನವಿ ಸಲ್ಲಿಸಿದ್ದಾರೆ.
2025 ರ ಸೆಪ್ಟಂಬರ 10 ರಂದು ಯೋಜನಾ ನಿರ್ದೇಶಕರು, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಉತ್ತರ ಕನ್ನಡ ಕಾರವಾರ ರವರ ಅಧ್ಯಕ್ಷತೆಯಲ್ಲಿ ನಡೆದ ಸ್ವಚ್ಛ ಭಾರತ ಮಿಷನ್ (ನಗರ) 2.0 ಯೋಜನೆಯ IEC ಚುಟುವಟಿಕೆಗಾಗಿ Interpersonal Communication ಗಾಗಿ ಕಮ್ಯೂನಿಟಿ ಮೊಬುಲೈಶರ್ನ್ನು (Community Mobilizer) ಬಂದಿರುವ ಅಭ್ಯರ್ಥಿಗಳ ಅರ್ಜಿಗಳಿಗೆ ಆಯ್ಕೆ ಕುರಿತು ನಗರ ಸ್ಥಳೀಯ ಸಂಸ್ಥೆಗಳಿಂದ ಸ್ವೀಕೃತವಾದ ಪ್ರಸ್ತಾವನೆಗೊಳಿಸಲು ನಾಲ್ಕು ಜನ ಸಿಬ್ಬಂದಿಗಳನ್ನು ನೇಮಕ ಮಾಡುತ್ತಾರೆ.
ದಾಂಡೇಲಿ ನಗರಸಭೆಗೆ ಅನುಮೋದನೆಗೊಂಡಿದ್ದು 9 ಹುದ್ದೆಗಳು ಆದರೆ ಕೇವಲ 4 ಹುದ್ದೆಗೆ ಸಿಬ್ಬಂದಿಗಳನ್ನು ನೇಮಕ ಮಾಡಿರುತ್ತಾರೆ. ಈ ಆಯ್ಕೆಯಾದ ಸಿಬ್ಬಂದಿಗಳನ್ನು ಯಾವ ವಿಷಯಕ್ಕಾಗಿ ಕೆಲಸಕ್ಕೆ ತೆಗೆದುಕೊಂಡಿದ್ದರೊ ಆ ಕೆಲಸಕ್ಕೆ ಇತ್ತೀಚೆಗೆ ಅಂದರೆ ಕಳೆದ ತಿಂಗಳು ಮಾರ್ಚ್ 2026 ರಿಂದ ಕೆಲಸ ಮಾಡಿಸುತ್ತಿದ್ದಾರೆ. ಆದರೆ ಅವರಿಗೆ ವೇತನವನ್ನು ನೇಮಕ ಮಾಡಿದ ದಿನಾಂಕ: 10-09-2025 ದಿಂದ ಪೂರ್ವನ್ವಯವಾಗುವಂತೆ ಸುಳ್ಳು ಬಿಲ್ ಹಾಗೂ ದಾಖಲೆ ಸಿದ್ದಪಡಿಸಿದ್ದಾರೆ. ಅಲ್ಲದೇ ಬಂದ ವೇತನದ ಒಟ್ಟು ಹಣವನ್ನು ಕೇವಲ ಎರಡು ಜನ ಸಿಬ್ಬಂದಿಗಳ ಖಾತೆಗೆ ಜಮಾ ಮಾಡಿದ್ದಾರೆ. ಅಷ್ಟೆ ಅಲ್ಲದೇ ಈ ಇಬ್ಬರು ಸಿಬ್ವಂದಿಗಳ ಖಾತೆಗೆ ಬಂದ ಹಣದಲ್ಲಿ ಕೇವಲ ಒಂದು ತಿಂಗಳು ವೇತನವನ್ನು ಮಾತ್ರ ಆ ಸಿಬ್ಬಂದಿಗೆ ಕೊಟ್ಟು ಉಳಿದೆಲ್ಲ ಒಟ್ಟು ವೇತನದ ಹಣವನ್ನು ಅವರಿಂದ ಮರಳಿ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ. ಇದೆಲ್ಲವೂ ಒಂದು ವಾರದಲ್ಲಿ ನಡೆದ ಪ್ರಕ್ರಿಯೆಯಾಗಿದೆ.
ದಾಂಡೇಲಿ ನಗರಸಭೆಯಲ್ಲಿ ಘನತ್ಯಾಜ್ಯ ನಿರ್ವಹಣೆ- ಆರೋಗ್ಯ ಶಾಖೆಯ ಹೊರಗುತ್ತಿಗೆ ನೌಕರರ ನೇಮಕಾತಿ ಅಧಿಕಾರಿಯೋರ್ವರು ಕಳೆದ ಎರಡ್ಮೂರು ವರ್ಷಗಳಿಂದ ಘನತ್ಯಾಜ್ಯ ಸ್ವಚ್ಛತಾ ನಿರ್ವಹಣಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಅಧಿಕಾರವಧಿಯಲ್ಲಿ ಸಕ್ಕಲಗಾ ಪ್ರದೇಶದಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕವನ್ನು ನಿರ್ಮಾಣ ಮಾಡಿದ್ದಾರೆ. ಹಲವು ಸ್ವಚ್ಚತಾ ವಾಹನಗಳನ್ನು ಹಾಗೂ ಸ್ವಚ್ಛತೆಯ ಕೆಲಸಕ್ಕೆ ಅಗತ್ಯವಿರುವ ಸಲಕರಣೆಗಳನ್ನು ಖರೀದಿಸಿದ್ದಾರೆ. ಆದರೆ ವಾಹನಗಳು ಸೇರಿದಂತೆ ಸಲಕರಣೆಗಳು ಉತ್ತಮ ಗುಣಮಟ್ಟದವಾಗಿರುವುದಿಲ್ಲ. ಕಳಪೆ ಗುಣಮಟ್ಟದ ಸಲಕರಣೆಗಳನ್ನು ಖರೀದಿಸಲಾಗಿದೆ. ಅಲ್ಲದೇ ವಾಹನಗಳು ಸೇರಿದಂತೆ ಸಲಕರಣೆಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಈ ಪ್ರಕ್ರಿಯೆಯಲ್ಲಿ ಅವ್ಯವಹಾರವಾಗಿರಬಹುದೆಂಬ ಸಾಕಷ್ಟು ವಿಷಯ ಕೇಳಿ ಬರುತ್ತಿದೆ. ಇವರ ಅವಧಿಯಲ್ಲಿ ಆಗಿರುವ ಒಟ್ಟು ಖರೀದಿ, ಟೆಂಡರ್ ಹಾಗೂ ಇತ್ಯಾದಿ ಪ್ರಕ್ರಿಯೆಯನ್ನು ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳು ಸಮಗ್ರವಾಗಿ ತನಿಖೆಗೊಳಪಡಿಸಬೇಕು ಎಂದು ಡಿ.ಸ್ಯಾಮಸನ್ ಒತ್ತಾಯಿಸಿದ್ದಾರೆ.
