ದಾಂಡೇಲಿ :
ಜನಸಂಖ್ಯೆಯ ದೃಷ್ಟಿಯಿಂದ ಅತ್ಯಂತ ಕಿರಿದಾಗಿರುವ ನಾಡವರ ಸಮುದಾಯ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ತನ್ನದೇ ಆದ ಹಿರಿಮೆಯನ್ನು ಹೊಂದಿರುವಂತಹ ಸಮಾಜವಾಗಿದೆ. ನಾಡವರ ಭಾಷೆ, ಜೀವನ ವಿಧಾನ ಹಾಗೂ ಸಂಸ್ಕೃತಿ ಅತ್ಯಂತ ವಿಶಿಷ್ಟವಾಗಿದೆ ಎಂದು ಕಾರವಾರದ ಲೋಕಾಯುಕ್ತ ಡಿವೈಎಸ್ಪಿ ಧನ್ಯಾ ಎನ್. ನಾಯಕ ನುಡಿದರು.
ಅವರು ದಾಂಡೇಲಿಯ ನಾಡವರ ಸಂಘ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಹಾಗೂ ಸೇವಾ ನಿವೃತ್ತರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದು ತಂತ್ರಜ್ಞಾನ ನಮಗೆ ಅತಿ ಅವಶ್ಯ. ಹಾಗೆಂದು ನಾವು ಮತ್ತು ನಮ್ಮ ಮಕ್ಕಳು ಮೊಬೈಲ್ ನಲ್ಲಿಯೇ ಕಳೆದು ಹೋಗಬಾರದು. ಮಕ್ಕಳಿಗೆ ಸಾಮಾನ್ಯ ಜ್ಞಾನದ ಅರಿವನ್ನು ನೀಡಬೇಕು. ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ಕೂಡ ನೀಡಬೇಕು ಎಂದ ಧನ್ಯಾ ನಾಯಕ ಅವರು ದಾಂಡೇಲಿಯ ನಾಡವರ ಸಮಾಜ ಹಮ್ಮಿಕೊಳ್ಳುತ್ತಿರುವ ರಚನಾತ್ಮಕ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿದ್ದ ಕಾರವಾರದ ದಂತ ವೈದ್ಯ ಡಾ. ಸಮೀರ್ ಕುಮಾರ್ ಟಿ. ನಾಯಕ ಮಾತನಾಡಿ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಿ ಗೌರವಿಸುವುದು ಹಾಗೂ ನಿವೃತ್ತರನ್ನು ಅಭಿನಂದಿಸುವುದು ನಿಜಕ್ಕೂ ಕೂಡ ಶ್ಲಾಘನಾರ್ಹ ಕಾರ್ಯವಾಗಿದೆ. ನಾಡವರ ಸಮಾಜದ ಹಿರಿಮೆ ಹಾಗೂ ಆಡು ಭಾಷೆಯನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿ ತಾನು ದಾಂಡೇಲಿಯಲ್ಲಿ ಹುಟ್ಟಿದ್ದನ್ನು, ಬಾಲ್ಯದ ದಿನಗಳನ್ನು ಕಳೆದಿರುವುದನ್ನು ಹಾಗೂ ತನ್ನ ತಂದೆ ತಾಯಿಗಳು ದಾಂಡೇಲಿಯಲ್ಲಿ ಸೇವೆ ಸಲ್ಲಿಸಿರುವುದನ್ನು ಸ್ಮರಿಸಿಕೊಂಡರು.
ಗೌರವ ಉಪಸ್ಥಿತಿಯರಿದ್ದ ಸಮಾಜದ ಹಿರಿಯರಾದ ಪ್ರಕಾಶ ಬಿ. ನಾಯಕ ಸಾಂದರ್ಭಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಡವರ ಸಂಘದ ಅಧ್ಯಕ್ಷ ಸುಭಾಷ ನಾಯಕ ದಾಂಡೇಲಿ ನಾಡವರ ಸಮಾಜ ಸಂಘಟನಾತ್ಮಕವಾಗಿ ಮಾದರಿಯಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬರುತ್ತಿದೆ. ಸಮಾಜದ ಪ್ರತಿಯೊಂದು ಕಾರ್ಯ ಚಟುವಟಿಕೆಗಳಿಗೂ ಸಮಾಜ ಬಾಂಧವರು ಅತ್ಯಂತ ಪ್ರೀತಿಯಿಂದ ಸಹಕಾರ ಹಾಗೂ ಪ್ರೋತ್ಸಾಹವನ್ನು ನೀಡುತ್ತಿರುವುದರಿಂದ ನಮ್ಮ ಸಮಾಜದ ಸಂಘ ವರ್ಷದಿಂದ ವರ್ಷಕ್ಕೆ ಪ್ರಗತಿಯೆಡೆಗೆ ಸಾಗುತ್ತಿದೆ ಎಂದು ಹೇಳಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ನಿವೃತ್ತರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಸುರೇಶ ನಾಯಕ, ವೆಂಕಮ್ಮ ಗಾಂವಕರ, ಶ್ಯಾಮಲಾ ನಾಯಕರನ್ನು ಸನ್ಮಾನಿಸಿ ಗೌರವಿಸಲಾಯ್ತು.
ಪ್ರತಿಭಾವಂತ ವಿದ್ಯಾರ್ಥಿಗಳಾದ ಆರಾಧನಾ ಬಸವರಾಜ್, ಸೃಷ್ಟಿ ಪ್ರವೀಣ ನಾಯಕ, ದ್ವಿತಿ ದೀಪಕ ನಾಯಕ, ಗಗನ ರವಿಕುಮಾರ್ ನಾಯಕ, ಅಕುಲ ಮಂಜುನಾಥ ನಾಯಕರನ್ನು ಪುರಸ್ಕರಿಸಲಾಯ್ತು. ಅತಿಥಿಗಳಾಗಿದ್ದ ಧನ್ಯಾ ನಾಯಕ ಹಾಗೂ ಸಮೀರ್ ನಾಯಕರನ್ನು ಸಮಾಜದ ವತಿಯಿಂದ ಗೌರವಿಸಲಾಯ್ತು. ಸನ್ಮಾನಿತರ ಪರವಾಗಿ ವೆಂಕಮ್ಮ ಗಾಂವಕರ ಹಾಗೂ ವಿದ್ಯಾರ್ಥಿಗಳ ಪರವಾಗಿ ಆರಾಧನಾ ಬಸವರಾಜ ಮಾತನಾಡಿದರು
ಸಂಘದ ಖಜಾಂಚಿ ರವಿ ಗಾಂವಕರ ಸ್ವಾಗತಿಸಿದರು. ಉಪಾಧ್ಯಕ್ಷೆ ಜೀವನಾ ನಾಯಕ ಪ್ರಾಸ್ತಾವಿಕ ಮಾತುಗಳಾಡಿದರು. ಕಾರ್ಯದರ್ಶಿ ಮಿಥುನ ನಾಯಕ ವರದಿ ವಾಚಿಸಿದರು. ಮಾನ್ಯತಾ ಪ್ರಾರ್ಥಿಸಿದರು. ನಿರುಪಮಾ ನಾಯಕ, ದೀಪ್ತಿ ನಾಯಕ, ಮೌರ್ಯ ನಾಯಕ ನಿರೂಪಿಸಿದರು.
