ಕಾರವಾರ :
ಕರಾವಳಿ ಉತ್ಸವ–2025ರ ಅಂಗವಾಗಿ ರವೀಂದ್ರನಾಥ ಟಾಗೋರ್ ಬೀಚ್ನಲ್ಲಿ ಗುರುವಾರ ಸಂಜೆ ಆಯೋಜಿಸಲಾಗಿದ್ದ ಮರಳು ಶಿಲ್ಪ ರಚನೆ ಹಾಗೂ ಗಾಳಿಪಟ ಉತ್ಸವ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಚಾಲನೆ ನೀಡಿದರು.
ಮರಳು ಶಿಲ್ಪ ರಚನೆ ಉತ್ತರ ಕನ್ನಡ ಜಿಲ್ಲೆಯ ಕಲಾ–ಸಂಸ್ಕೃತಿ ವಿಷಯಾಧಾರಿತವಾಗಿದ್ದು, ಉಡುಪಿಯಿಂದ ಆಗಮಿಸಿದ್ದ ಕಲಾವಿದರ ತಂಡ ಪದ್ಮಶ್ರೀ ಸುಕ್ರೀ ಗೌಡ, ಯಕ್ಷಗಾನದ ಕಿರೀಟ, ಆಮೆ, ದೋಣಿ ಸೇರಿದಂತೆ ಜಿಲ್ಲೆಯ ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಮರಳಿನಲ್ಲಿ ಆಕರ್ಷಕವಾಗಿ ರೂಪಿಸಿತು. ಕಲಾವಿದರ ಕೈಚಳಕಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ಆದರೆ ಉತ್ತರ ಕನ್ನಡ ಜಿಲ್ಲೆಯಿಂದ ಒಬ್ಬರೂ ಕಲಾವಿದರು ಮರಳು ಶಿಲ್ಪ ಪ್ರದರ್ಶನದಲ್ಲಿ ಭಾಗವಹಿಸದಿರುವುದು ವಿಷಾದಕರ ಸಂಗತಿಯಾಗಿ ಕಂಡುಬಂದಿತು. ಬಳಿಕ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳೊಂದಿಗೆ ಸಭಾಪತಿಗಳು ಗಾಳಿಪಟ ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು.
ನಂತರ ಪ್ರಜಾ ಸೌಧದಲ್ಲಿ ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನ ಹಾಗೂ ರಂಗೋಲಿ ಪ್ರದರ್ಶನವನ್ನು ಸಭಾಪತಿಗಳು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಗಾಳಿಪಟ ಹಾರಿಸಿ ಸಂಭ್ರಮಿಸಿದರು. ಉತ್ಸವದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೆಕರ, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೀಷ್ ಶಶಿ, ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ತರಬೇತಿ ನಿರತ ಐಎಎಸ್ ಅಧಿಕಾರಿ ಝೂಫಿಷನ್ ಹಕ್, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ಎಂ. ನಾಯ್ಕ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸುನೀಲ್ ಅಂಕೋಲೇಕರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
