ಕಾರವಾರ:
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ ನಾಲ್ಕು ತಿಂಗಳಿಂದ ಹೇಳಿಕೆ ನೀಡುತ್ತಿದ್ದು, ಅದು ಯಾವಾಗ ಕಾರ್ಯರೂಪಕ್ಕೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಆರ್.ವಿ. ದೇಶಪಾಂಡೆ ಹೇಳಿದರು.
ಕಾರವಾರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ತಮ್ಮಲ್ಲಿ ಆಕಾಂಕ್ಷೆ ಇಟ್ಟುಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂದರು. “ಒಬ್ಬ ಕಾರ್ಯಕರ್ತ ನಾನು ಶಾಸಕ ಆಗಬೇಕು, ಅಧ್ಯಕ್ಷ ಆಗಬೇಕು ಎಂದು ಆಶಿಸುವುದು ಸಹಜ. ಗುರಿ ಇಟ್ಟಾಗಲೇ ಸಾಧನೆ ಸಾಧ್ಯ. ಯಾವುದೇ ಗುರಿಯಿಲ್ಲದೇ ಸಾಧನೆ ಸಾಧ್ಯವಿಲ್ಲ,” ಎಂದು ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿದ ಆರ್.ವಿ. ದೇಶಪಾಂಡೆ, ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಣಗಳಿಲ್ಲ ಎಂದು ಸ್ಪಷ್ಟಪಡಿಸಿದರು. “ಈ ವಿಷಯದಲ್ಲಿ ಎಲ್ಲರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ದರಾಗಿದ್ದೇವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮುಖ್ಯಮಂತ್ರಿ ಕೂಡ ಹೈಕಮಾಂಡ್ ಮಾತಿಗೆ ಬದ್ದ ಎಂದಿದ್ದಾರೆ,” ಎಂದು ಹೇಳಿದರು.
ಅನಾವಶ್ಯಕ ಚರ್ಚೆಗಳಿಗೆ ಅವಕಾಶ ನೀಡಬಾರದು ಎಂದು ಸಲಹೆ ನೀಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಕುರಿತು ಯಾರೂ ಚರ್ಚೆ ನಡೆಸಬಾರದು ಎಂದು ಹೇಳಿದರು.
