ಶಿರಸಿ: ಮಣಿಪುರಂ ಫೈನಾನ್ಸಿನಲ್ಲಿ ಕೆಲಸ ಮಾಡುತ್ತಿದ್ದ ರಾಜು ಲಮಾಣಿ ಎಂಬಾತರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರದು ವಂಚಿಸಿದ ಆರೋಪದ ಅಡಿ ಪತ್ರಕರ್ತ ರವೀಶ ಹೆಗಡೆ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.
ಮುಂಡಗೋಡು ಪಾಳಾದ ರಾಜು ಭೀಮಣ್ಣ ಲಮಾಣಿ ಅವರು ಮಣಿಪುರಂ ಫೈನಾನ್ಸಿನಲ್ಲಿ ಕೆಲಸ ಮಾಡುತ್ತಿದ್ದರು. ಚಿಪಗೇರಿಯ ಮಹಾಬಲೇಶ್ವರ ಹೆಗಡೆ ಅವರ ವ್ಯಾಪಾರಕ್ಕೆ ಅನುಕೂಲವಾಗುವಂತೆ ರಾಜು ಅವರು ಬಂಗಾರದ ಮೇಲಿನ ಸಾಲ ಮಾಡಿಸಿಕೊಟ್ಟಿದ್ದರು. ಮಹಾಬಲೇಶ್ವರ ಹೆಗಡೆ ಮೊದಲು ಸಾಲವನ್ನು ಸಮಯಕ್ಕೆ ಸರಿಯಾಗಿ ತೀರಿಸಿ ರಾಜು ಲಮಾಣಿ ಅವರ ನಂಬಿಕೆಗಳಿಸಿದ್ದರು. ಹೀಗಾಗಿ ಅವರು ಕೇಳಿದಾಗಲೆಲ್ಲ ರಾಜು ಅವರು ಸಾಲ ಕೊಡಿಸುತ್ತಿದ್ದರು.
2023ರ ಅವಧಿಯಲ್ಲಿ ಸಾಲದ ಮಿತಿ ಮೀರಿದಾಗ ಅದನ್ನು ಮರಳಿಸುವಂತೆ ರಾಜು ಮಹಾಬಲೇಶ್ವರ ಹೆಗಡೆ ಅವರಿಗೆ ಸೂಚಿಸಿದ್ದರು. ಆದರೆ, ಸಾಲವನ್ನು ಅವರು ತೀರಿಸಿರಲಿಲ್ಲ. ಈ ವಿಷಯವಾಗಿ ರಾಜು ಲಮಾಣಿ ಹಾಗೂ ಮಹಾಬಲೇಶ್ವರ ಹೆಗಡೆ ನಡುವೆ ಮನಸ್ತಾಪವಾಗಿತ್ತು. ತಾರಗೋಡು ಕ್ರಾಸಿನ ಬಳಿ ಈ ಇಬ್ಬರು ಜಗಳ ಮಾಡಿಕೊಂಡು ಮುನಿಸಿಕೊಂಡಿದ್ದರು.
ಈ ವೇಳೆ ಅಲ್ಲಿಗೆ ಬಂದ ಸಿದ್ದಾಪುರ ಸುಂಡಲೇಬೈಲಿನ ರವೀಶ ಹೆಗಡೆ ಇಬ್ಬರ ನಡುವೆ ರಾಜಿ-ಸಂದಾನ ಮಾಡಿಸುವುದಾಗಿ ಹೇಳಿಕೊಂಡಿದ್ದು, `ಮಹಾಬಲೇಶ್ವರ ಹೆಗಡೆ ಅವರ ಜೊತೆ ಸೇರಿ ತಾನೂ ಸಾಲದ ಮೊತ್ತ ಪಾವತಿಸುವೆ\’ ಎಂದು ಭರವಸೆ ನೀಡಿದ್ದ. `ಸಾಲ ತೀರಿಸಲು ಹೊಸದಾಗಿ ಬ್ಯಾಂಕ್ ಖಾತೆ ತೆರೆಯಬೇಕು. ಅದಕ್ಕೆ ಸಾಕಷ್ಟು ಹಣ ಬರಲಿದ್ದು, ಕೊನೆಯ ಕಂತು ನಿಮಗೆ ಸಿಗಲಿದೆ\’ ಎಂದು ರವೀಶ ಹೆಗಡೆ ನಂಬಿಸಿದ್ದ. ಇದನ್ನು ನಂಬಿದ ರಾಜು ಲಮಾಣಿ ಕಾಗದ ಪತ್ರಗಳಿಗೆ ಸಹಿ ಮಾಡಿ ಕೊಟ್ಟಿದ್ದರು. ಬ್ಯಾಂಕ್ ಖಾತೆ ತೆರದ ರವೀಶ ಹೆಗಡೆ ಆನ್ಲೈನ್ ಬ್ಯಾಂಕಿAಗ್\’ನ ಐಡಿ ಹಾಗೂ ಪಾಸ್ವರ್ಡನ್ನು ರಾಜು ಅವರಿಗೆ ನೀಡಿರಲಿಲ್ಲ.
ಈ ನಡುವೆ ರವೀಶ ಹೆಗಡೆ ಜನರಿಗೆ ಸಾಲ ಕೊಡಿಸುವ ನೆಪದಲ್ಲಿ ಹಣ ಪಡೆದು ವಂಚಿಸುತ್ತಿರುವುದನ್ನು ಅರಿತ ರಾಜು ಲಮಾಣಿ ತಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ವಂಚಿಸಿದ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ.