ದಾಂಡೇಲಿ :
ಕೊರೊನಾ ಮಹಾಮಾರಿಯಿಂದ ಸ್ಥಗಿತಗೊಂಡಿದ್ದ ದಾಂಡೇಲಿ – ಅಳ್ನಾವರ ಪ್ಯಾಸೆಂಜರ್ ರೈಲು ಸಂಚಾರವು ಇದೇ ಫೆ.07ರಂದು ಪುನರಾರಂಭವಾಗಲಿದ್ದು, ಅಂದು ಸಂಜೆ 4 ಗಂಟೆಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಉಪಸ್ಥಿತಿಯಲ್ಲಿ ರೈಲು ಸಂಚಾರ ಪುನರಾರಂಭಕ್ಕೆ ಚಾಲನೆಯನ್ನು ನೀಡಲಿದ್ದಾರೆ ಎಂದು ಮಾಜಿ ಶಾಸಕ ಸುನೀಲ ಹೆಗಡೆಯವರು ಹೇಳಿದರು.
ಅವರು ಮಂಗಳವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಹೇಳಿದರು. ಕೊರೊನಾದಿಂದಾಗಿ ಸ್ಥಗಿತಗೊಂಡಿದ್ದ ದಾಂಡೇಲಿ – ಅಳ್ನಾವರ ಪ್ಯಾಸೆಂಜರ್ ರೈಲು ಸಂಚಾರ ಸೇವೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ನಿರಂತರ ಪರಿಶ್ರಮದ ಫಲವಾಗಿ ಮತ್ತೆ ಆರಂಭಗೊಳ್ಳುತ್ತಿದೆ. ದಾಂಡೇಲಿ ಜನತೆಯ ಬಹುವರ್ಷಗಳ ಈ ಬೇಡಿಕೆ ಈಡೇರಿಕೆಗಾಗಿ ವಿವಿಧ ಸಂಘ ಸಂಸ್ಥೆಗಳು ಸಹ ಸಾಕಷ್ಟು ಮನವಿ, ಹೋರಾಟಗಳನ್ನು ಮಾಡಿತ್ತು. ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಅಳ್ನಾವರ ಸ್ಟೇಷನ್ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದಿದ್ದ ಸಂದರ್ಭದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ನೇತೃತ್ವದ ನಿಯೋಗದ ಮೂಲಕ ನಾವು ಸಹ ಮನವಿಯನ್ನು ಮಾಡಿ ಒತ್ತಡವನ್ನು ತಂದಿದ್ದೇವು. ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಈ ಹಿಂದೆ ರೈಲು ಸಂಚಾರ ಸ್ಥಗಿತಗೊಳ್ಳಲು ಕಾರಣಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಿ, ಇದೀಗ ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ರೈಲು ಸಂಚಾರ ಪುನರಾರಂಭವಾಗುತ್ತಿರುವುದು ಇಲ್ಲಿಯ ಪ್ರವಾಸೋದ್ಯಮದ ಪ್ರಗತಿಗೂ ಬಹುಮೂಲ್ಯ ಕೊಡುಗೆಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಬುದವಂತಗೌಡ ಪಾಟೀಲ್, ಉಪಾಧ್ಯಕ್ಷ ಗುರು ಮಠಪತಿ, ಪ್ರಧಾನ ಕಾರ್ಯದರ್ಶಿಗಳಾದ ಮಿಥುನ್ ನಾಯಕ ಮತ್ತು ಗಿರೀಶ ಠೋಸೂರು, ಪಕ್ಷದ ಮಾಜಿ ಅಧ್ಯಕ್ಷರಾದ ರೋಷನ್ ನೇತ್ರಾವಳಿ, ಪಕ್ಷದ ಪ್ರಮುಖರಾದ ರವಿ ಗಾಂವಕರ, ದಶರಥ ಬಂಡಿವಡ್ಡರ,ಚನ್ನಬಸಪ್ಪ ಮುರಗೋಡ, ಮಂಜು ಶಟ್ಟಿ, ಜಯಶ್ರೀ ನ್ಯಾಮತಿ, ಪದ್ಮಜಾ ಜನ್ನು, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
