ಜೋಯಿಡಾ:
ತಾಲೂಕಿನ ಅನಮೋಡ ಪ್ರದೇಶದಲ್ಲಿ ಗೋವಾಕ್ಕೆ ಎಮ್ಮೆಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಪ್ರಕರಣವನ್ನು ರಾಮನಗರ ಪೊಲೀಸರು ಭೇದಿಸಿದ್ದು, ಮೂರು ಐಷರ್ ವಾಹನಗಳು ಹಾಗೂ 36 ಎಮ್ಮೆಗಳನ್ನು ವಶಪಡಿಸಿಕೊಂಡು ಆರು ಮಂದಿಯನ್ನು ಬಂಧಿಸಿದ್ದಾರೆ.
ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅನಮೋಡ ಮಾರ್ಗವಾಗಿ ಎಮ್ಮೆಗಳನ್ನು ಸಾಗಿಸುತ್ತಿದ್ದ ಮೂರು ಐಷರ್ ವಾಹನಗಳು ಬರುತ್ತಿರುವುದನ್ನು ಸ್ಥಳೀಯ ನಾಗರಿಕರು ಗಮನಿಸಿದ್ದಾರೆ. ಸಂಶಯಗೊಂಡ ಗ್ರಾಮಸ್ಥರು ವಾಹನಗಳನ್ನು ತಡೆದು ಪರಿಶೀಲಿಸಿದಾಗ, ಎಮ್ಮೆಗಳನ್ನು ಅತಿಯಾಗಿ ತುಂಬಿ ಕ್ರೂರ ರೀತಿಯಲ್ಲಿ ಸಾಗಿಸಲಾಗುತ್ತಿರುವುದು ಬೆಳಕಿಗೆ ಬಂದಿದೆ. ತಕ್ಷಣ ಈ ಕುರಿತು ರಾಮನಗರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಮಾಹಿತಿ ಪಡೆದ ರಾಮನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪಂಚನಾಮೆ ನಡೆಸಿ ಮೂರು ಐಷರ್ ವಾಹನಗಳನ್ನು ವಶಕ್ಕೆ ಪಡೆದರು. ಪ್ರಾಥಮಿಕ ತನಿಖೆಯಲ್ಲಿ ಮಹಾರಾಷ್ಟ್ರದ ಗಢಿಂಗ್ಲಿಯಿಂದ ಗೋವಾದ ಕಸಾಯಿಖಾನೆಗಳಿಗೆ ಅನಮೋಡ ಮಾರ್ಗವಾಗಿ ಎಮ್ಮೆಗಳನ್ನು ಸಾಗಿಸಲಾಗುತ್ತಿತ್ತು ಎಂಬುದು ತಿಳಿದುಬಂದಿದೆ. ಪ್ರತಿ ಐಷರ್ ವಾಹನದಲ್ಲಿ ತಲಾ 12 ಎಮ್ಮೆಗಳಂತೆ ಒಟ್ಟು 36 ಎಮ್ಮೆಗಳ ಸಾಗಣೆ ನಡೆಯುತ್ತಿತ್ತು.
ಪೊಲೀಸ್ ತನಿಖೆಯಲ್ಲಿ ಗಢಿಂಗ್ಲನ ಪಶುವೈದ್ಯಾಧಿಕಾರಿಯಿಂದ ಆರೋಗ್ಯ ಪ್ರಮಾಣಪತ್ರ ಲಗತ್ತಿಸಿರುವುದು ಕಂಡುಬಂದಿದ್ದರೂ, ಮಹಾರಾಷ್ಟ್ರದಿಂದ ಕರ್ನಾಟಕ ರಾಜ್ಯದ ಮೂಲಕ ಗೋವಾಕ್ಕೆ ಎಮ್ಮೆಗಳನ್ನು ಸಾಗಿಸಲು ಅಗತ್ಯವಿರುವ ಮಾನ್ಯ ಕರ್ನಾಟಕ ರಾಜ್ಯ ಪರವಾನಗಿ ಇಲ್ಲದಿರುವುದು ಸ್ಪಷ್ಟವಾಗಿದೆ. ಇದರಿಂದ ಸಾಗಣೆ ಕಾನೂನುಬಾಹಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಆರೋಪಿಗಳ ವಿರುದ್ಧ ಅಕ್ರಮ ಪ್ರಾಣಿ ಸಾಗಣೆ ತಡೆ ಕಾಯ್ದೆ ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ವಶಪಡಿಸಿಕೊಂಡ ಎಮ್ಮೆಗಳನ್ನು ಸೂಕ್ತ ಆರೈಕೆಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ರಾಮನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
