ಕಾರವಾರ:
ಸೀಬರ್ಡ್ ನೌಕಾನಲೆ ಯೋಜನೆಗೆ ಭೂ ಸ್ವಾದೀನಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 18 (1) ಅಡಿಯಲ್ಲಿನ 5 ಪ್ರಕರಣ ಮತ್ತು 28 ಬಿ ಅಡಿಯಲ್ಲಿನ 112 ಪ್ರಕರಣಗಳಿಗೆ ಒಟ್ಟು ರೂ.27.70 ಕೋಟಿಗಳ ಹೆಚ್ಚುವರಿ ಪರಿಹಾರವನ್ನು ಬಿಡುಗಡೆಗೊಳಿಸಿದ್ದು, ಇವುಗಳಲ್ಲಿ ಅಗತ್ಯ ದಾಖಲೆಗಳನ್ನು ಒದಗಿಸಿದ 35 ಪ್ರಕರಣಗಳಲ್ಲಿನ ಫಲಾನುಭವಿಗಳಿಗೆ ರೂ.6.87 ಕೋಟಿ ಪರಿಹಾರವನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಶನಿವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಿದರು.
ನಂತರ ಮಾತನಾಡಿದ ಅವರು ಸೀಬರ್ಡ್ ನೌಕಾನಲೆ ಯೋಜನೆಗೆ ಭೂ ಸ್ವಾದೀನಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಕಿ ಪರಿಹಾರದ ಮೊತ್ತವನ್ನು ಪಾವತಿಗೆ ಇರುವ ಸಮಸ್ಯೆಗಳ ಕುರಿತು ಕೇಂದ್ರ ರಕ್ಷಣಾ ಸಚಿವರಿಗೆ ಮನವಿಯನ್ನು ಸಲ್ಲಿಸಿದ್ದು, ಅದರಂತೆ ಇದಕ್ಕಾಗಿ ವಿಶೇಷ ಅಧಿಕಾರಿಯನ್ನು ಸಚಿವರು ನೇಮಕ ಮಾಡಿದ ನಂತರ ಪರಿಹರದ ಮೊತ್ತ ಬಿಡುಗಡೆ ಕಾರ್ಯ ಶೀಘ್ರಗೊಂಡಿದ್ದು, ಇದುವರೆಗೆ ರೂ.35 ಕೋಟಿ ಬಿಡುಗಡೆಗೊಂಡಿದೆ. ಬಾಕಿ ಉಳಿದಿರುವ 215 ಪ್ರಕರಣಗಳಿಗೆ ಬಿಡುಗಡೆಯಗಬೇಕಾದ ರೂ.28.82 ಕೋಟಿ ಮೊತ್ತ ಕೂಡಾ ತ್ವರಿತಗತಿಯಲ್ಲಿ ಬಿಡುಗಡೆಗೊಳ್ಳಲಿದೆ ಎಂದರು.
ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಕೆಲಸಗಳು ಉತ್ತಮವಾಗಿ ನಡೆಯುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 52ರ ಹೊಸಳ್ಳಿಯಿಂದ ಯಲ್ಲಾಪುರ ಹಾಗೂ ಮಾಸ್ತಿಕಟ್ಟೆಯಿಂದ ಬಾಳೆಗುಳಿ ವರೆಗಿನ ರಸ್ತೆ ಅಭಿವೃದ್ದಿಗೆ ರೂ.101 ಕೋಟಿ ಅನುದಾನ ಮಂಜೂರಾಗಿದೆ. ಕೊಂಕಣ ರೈಲ್ವೆಯಲ್ಲಿ ಬಾಕಿ ಇರುವ ಭೂ ಸ್ವಾಧೀನ ಪ್ರಕರಣಗಳ ಕುರಿತು ವಿಚಾರಣೆ ತ್ವರಿತಗತಿಯಲ್ಲಿ ನಡೆಯುತಿದ್ದು, ಸಂತ್ರಸ್ಥರಿಗೆ ಶೀಘ್ರದಲ್ಲಿ ಪರಿಹಾರ ದೊರೆಯಲಿದೆ ಎಂದ ಅವರು, ಪ್ರಸ್ತುತ ಸೀಬರ್ಡ್ ಸಂತ್ರಸ್ಥರು ತಮಗೆ ದೊರೆತಿರುವ ಪರಿಹಾರದ ಮೊತ್ತವನ್ನು ಉತ್ತಮ ಕಾರ್ಯಗಳಿಗೆ ಬಳಸಿಕೊಳ್ಳುವಂತೆ ತಿಳಿಸಿದರು.
ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿ.ಪಂ. ಸಿಇಓ ಡಾ.ದಿಲೀಷ್ ಶಶಿ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಸಹಾಯಕ ಆಯುಕ್ತ ಶ್ರವಣ ಕುಮಾರ್, ತರಬೇತಿ ನಿರತ ಐ.ಎ.ಎಸ್. ಅಧಿಕಾರಿ ಝೂಪಿಶಾನ್ ಹಕ್ ಉಪಸ್ಥಿತರಿದ್ದರು.
