ದಾಂಡೇಲಿ :
ಹಳಿಯಾಳ – ದಾಂಡೇಲಿ ರಾಜ್ಯ ಹೆದ್ದಾರಿಯ ಆಲೂರು ಕ್ರಾಸ್ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿಯಾಗಿ ಮೂವರಿಗೆ ಗಾಯವಾದ ಘಟನೆ ಬುಧವಾರ ಸಂಜೆ ನಡೆದಿದೆ.
ದಾಂಡೇಲಿ ಕಡೆಯಿಂದ ಹಳಿಯಾಳಕ್ಕೆ ಹೋಗುತ್ತಿದ್ದ ಕೆಎ 30, ಎಂ.4111 ನೋಂದಣಿ ಸಂಖ್ಯೆಯ ಕಾರು ಚಾಲಕನ ನಿಯಂತ್ರಣ ತಪ್ಪಿ ಆಲೂರು ಕ್ರಾಸ್ ಹತ್ತಿರ ಮರಕ್ಕೆ ಡಿಕ್ಕಿಯಾಗಿದೆ. ಕಾರಿನಲ್ಲಿದ್ದ ಹಳಿಯಾಳ ತಾಲೂಕಿನ ಶಿವಪುರ ಎಂಬಲ್ಲಿಯ ಶಿವಯ್ಯ ಫಕೀರಯ್ಯ ತೇರಗಾವಿ, ಹಳಿಯಾಳ ತಾಲೂಕಿನ ಮುರ್ಕವಾಡದ ಸತ್ಯ ಕುಮಾರ್ ಸುಭಾಷ್ ಕುಮಾರ್ ಕಮ್ಮಾರ್ ಮತ್ತು ಶಿವಪುರ ಗ್ರಾಮದ ವಿಠ್ಠಲ ಮಹಾದೇವಪ್ಪ ದರ್ಗದ್ ಅವರುಗಳಿಗೆ ಗಾಯವಾಗಿದೆ. ಗಾಯಗೊಂಡವರನ್ನು ತಕ್ಷಣವೇ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿದೆ . ಗಾಯಗೊಂಡವರ ಪೈಕಿ ಶಿವಯ್ಯ ಫಕೀರಯ್ಯ ತೇರಗಾವಿ ಮತ್ತು ಸತ್ಯ ಕುಮಾರ್ ಸುಭಾಷ್ ಕುಮಾರ್ ಕಮ್ಮಾರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ ರವಾನಿಸಲಾಗಿದೆ. ವಿಠ್ಠಲ ಮಹಾದೇವಪ್ಪ ದರ್ಗದ್ ಅವರಿಗೆ ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಘಟನಾ ಸ್ಥಳಕ್ಕೆ ಮತ್ತು ಸಾರ್ವಜನಿಕ ಆಸ್ಪತ್ರೆಗೆ ದಾಂಡೇಲಿ ಗ್ರಾಮೀಣ ಠಾಣೆಯ ಪಿಎಸ್ಐಗಳಾದ ಶಿವಾನಂದ ನಾವದಗಿ ಮತ್ತು ಜಗದೀಶ ನಾಯ್ಕ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
