ಹಳಿಯಾಳ:
ಗಾಂಜಾ ವ್ಯಾಪಾರಿಗಳು ತಮ್ಮ ಅಕ್ರಮ ಚಟುವಟಿಕೆಗೆ ಯಾವುದಕ್ಕೂ ಹೆದರದೇ, ರುದ್ರಭೂಮಿ ಸುತ್ತಮುತ್ತಲಿನ ಪ್ರದೇಶವನ್ನೂ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಪಟ್ಟಣದ ಗುತ್ತಿಗೇರಿ ಗಲ್ಲಿಯ ರುದ್ರಭೂಮಿ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಹಳಿಯಾಳ Demands ಬಂಧಿಸಿ, ಅಕ್ರಮ ಜಾಲಕ್ಕೆ ಕಡಿವಾಣ ಹಾಕಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ ವೇಳೆ ಆರೋಪಿಗಳಾದ ಶುಭಮ್ ಮಠದ ಹಾಗೂ ಕೃಷ್ಣಾ ಮಡಿವಾಳ ಅವರನ್ನು ವಶಕ್ಕೆ ಪಡೆದುಕೊಂಡರು. ಅವರ ಬಳಿಯಿಂದ ಸುಮಾರು 307 ಗ್ರಾಂ ಗಾಂಜಾ ಹಾಗೂ ಹೊಂಡಾ ಏಕ್ಟಿವಾ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಆರೋಪಿಗಳು ರುದ್ರಭೂಮಿ ಸುತ್ತಮುತ್ತಲಿನ ಏಕಾಂತ ಪ್ರದೇಶವನ್ನು ಬಳಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದರೆಂಬ ಶಂಕೆ ವ್ಯಕ್ತವಾಗಿದೆ. ಈ ಪ್ರದೇಶಕ್ಕೆ ಕೆಲವರು ರಾತ್ರಿ ವೇಳೆ ಆಗಾಗ್ಗೆ ಬರುತ್ತಿರುವ ಬಗ್ಗೆ ಸ್ಥಳೀಯರಿಂದಲೂ ಮಾಹಿತಿ ಲಭಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಗೂಢಚರ್ಯೆ ನಡೆಸಿ ಕಾರ್ಯಾಚರಣೆ ಕೈಗೊಂಡರು.
ಈ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳು ಗಾಂಜಾವನ್ನು ಎಲ್ಲಿಂದ ತರಲಾಗುತ್ತಿತ್ತು ಹಾಗೂ ಇನ್ನಾರಾದರೂ ಈ ಜಾಲದಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಕೃಷ್ಣಮೂರ್ತಿ, ಜಗದೀಶ ನಾಯ್ಕ, ಡಿವೈಎಸ್ಪಿ ಶಿವಾನಂದ ಮದರಕಂಡಿ ಹಾಗೂ ಸಿಪಿಐ ಜಯಪಾಲ್ ಪಾಟೀಲ್ ಅವರ ನಿರ್ದೇಶನದಲ್ಲಿ ಪಿಎಸ್ಐ ಬಸವರಾಜ ಮಬನೂರ ಮತ್ತು ಕೃಷ್ಣಾ ಅರಕೇರಿ ಅವರ ನೇತೃತ್ವದಲ್ಲಿ ಗಣಪತಿ, ಶ್ರೀಶೈಲ್ ಜಿ.ಎಂ., ವಿನೋದ್ ಜಿ.ಬಿ., ಮಂಜುನಾಥ, ಸುನೀಲ ಮತ್ತು ಮಲ್ಲಿಕಾರ್ಜುನ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಈ ಘಟನೆ ಮೂಲಕ ಪಟ್ಟಣದಲ್ಲಿ ಗಾಂಜಾ ಮಾರಾಟದ ಜಾಲದ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಅಕ್ರಮ ಚಟುವಟಿಕೆಗಳಿಗೆ ತಡೆಯೊಡ್ಡಲು ಪೊಲೀಸರು ಇನ್ನಷ್ಟು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
