
ದಾಂಡೇಲಿ :
ಇಂದು ಜಗತ್ತಿನ ದೊಡ್ಡ ದೊಡ್ಡ ಕ್ರೀಡಾಪಟುಗಳು ಮಾದಕ ದ್ರವ್ಯ ಸೇವಿಸಿ ಕ್ರೀಡೆಯಿಂದ ಅನರ್ಹರಾಗುತ್ತಿರುವುದು ನೋವಿನ ಸಂಗತಿ. ಹೀಗಾಗಿ ಕ್ರೀಡೆಯಲ್ಲಿ ಕ್ರೀಯಾಶೀಲರಾಗಿರುವ ಯುವ ಕ್ರೀಡಾಪಟುಗಳು ಮಾದಕ ದ್ರವ್ಯಗಳಿಗೆ ಬಲಿಯಾಗದಂತೆ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ನೈತಿಕತೆೆಯಿಲ್ಲದ ಇಂತಹ ಚಟುವಟಿಕೆಗಳು ಕ್ರೀಡಾ ಲೋಕದ ಪಾವಿತ್ರ್ಯವನ್ನು ನಾಶಮಾಡುತ್ತವೆಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಬಿ.ಎಂ.ಪಾಟೀಲ ರವರು ಅಭಿಪ್ರಾಯಪಟ್ಟರು. ಅವರು ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯ ಪುರುಷ ಮತ್ತು ಮಹಿಳಾ ಕುಸ್ತಿ ಪಂದ್ಯಾವಳಿ ಹಾಗೂ ವಿಶ್ವವಿದ್ಯಾಲಯದ ತಂಡದ ಆಯ್ಕೆಯ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕ್ರೀಡೆಯಲ್ಲಿ ರಾಷ್ಟçಮಟ್ಟದ ಸಾಧನೆ ಮಾಡಿದವರಿಗೆ ಉತ್ತಮ ಉದ್ಯೋಗಗಳು ಮನೆ ಬಾಗಿಲಿಗೆ ಬರುತ್ತವೆ. ಕ್ರೀಡಾಪಟುಗಳು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ಅತ್ಯಂತ ಅಚ್ಚುಕಟ್ಟಾಗಿ ಎಲ್ಲ ವ್ಯವಸ್ಥೆಗಳೊಂದಿಗೆ ಕ್ರೀಡಾಕೂಟವನ್ನು ಸಂಘಟಿಸಿದ ದಾಂಡೇಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕುಲಪತಿಗಳು ಅಭಿನಂದನೆ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಡಾ. ನಿಜಲಿಂಗಪ್ಪ ಮಟ್ಟಿಹಾಳ ಅವರು ಸಾಹಿತ್ಯ ಸಂಸ್ಕೃತಿ ಕಲೆಗಳಿಗಿಂತಲೂ ಕ್ರೀಡೆಗೆ ಜಗತ್ತಿನಲ್ಲಿ ಹೆಚ್ಚು ಗೌರವ ಮತ್ತು ಜನಪ್ರಿಯತೆಗಳಿವೆ. ಶೇಷ್ಠ ಕ್ರೀಡಾಪಟುಗಳಾದವರು ಜಗತ್ತಿನ ಗೌರವಕ್ಕೆ ಪಾತ್ರರಾಗುತ್ತಾರೆ. ತಾವೆಲ್ಲಾ ಅಂತಹ ಗೌರವವನ್ನು ಪಡೆಯಲು ಅವಿರತ ಶ್ರಮವಹಿಸಬೇಕೆಂದು ಕಿವಿಮಾತು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಎಂ.ಡಿ.ಒಕ್ಕುಂದ ಅವರು ಮಾತನಾಡಿ ಇಂದು ನಡೆಯುತ್ತಿರುವುದು ಸ್ಪರ್ಧೆ ಮತ್ತು ಆಯ್ಕೆ ಮಾತ್ರವಲ್ಲ, ಕ್ರೀಡಾಪಟುಗಳಿಗೆ ಆರೋಗ್ಯಪೂರ್ಣವಾದ ಕ್ರೀಡಾಮನೋಭಾವವನ್ನು ಬೆಳೆಸುವ ಕಾರ್ಯಾಗಾರವಾಗಿದೆ. ಸೋಲು ಗೆಲುವಿನಾಚೆ ಕ್ರೀಡಾ ಸ್ಪೂರ್ತಿಯನ್ನು ಮೈಗೂಡಿಸಿಕೊಳ್ಳಬೇಕೆಂದು ಸೂಚಿಸಿದರು. ಈ ಕಾರ್ಯಕ್ರಮದಲ್ಲಿ ಬಸೀರಹಮ್ಮದ ಗಿರಿಯಾಳ ಮತ್ತು ದಾದಾಪೀರ ನದಿಮುಲ್ಲಾ, ರಫೀಕ ಖಾನ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಶ್ರೀ ಬಸವರಾಜ ಹೂಲಿಕಟ್ಟಿ ಸ್ವಾಗತಿಸಿ, ಸಂಚಾಲಕರಾದ ಶ್ರೀ ಮನೋಹರ ಉಡಚಂಚಿ ವಂದಿಸಿದರು. ಡಾ. ಸುರೇಶ ವಾಲಿಕರ ನಿರೂಪಿಸಿದರು.
ಸಂಜೆ ನಡೆದ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀ ಅನೀಲ ಪಾಟ್ನೇಕರ, ಸಾಯಿ ಹಾಸ್ಟೇಲ್ ಧಾರವಾಡದ ನಿವೃತ್ತ ಕುಸ್ತಿ ತರಬೇತಿದಾರರಾದ ಶ್ರೀ ಶಂಕರಪ್ಪ ಹಾಗೂ ಆಯ್ಕೆ ಸಮಿತಿಯ ಸದಸ್ಯರು ಪ್ರಶಸ್ತಿ ವಿತರಿಸಿದರು.