ದಾಂಡೇಲಿ:
ಜಗತ್ನಸಿದ್ಧ ಸಾಗುವಾನಿ, ಸೀಸಂ ಸೇರಿದಂತೆ ಇನ್ನಿತರೆ ಕಟ್ಟಿಗೆಗಳಿಗೆ ಹೆಸರುವಾಸಿಯಾದ ದಾಂಡೇಲಿ ನಗರದಲ್ಲಿ ಮರಮುಟ್ಟು ಸಂಗ್ರಹಾಲಯದಿಂದ ವಿವಿಧ ನಾಟಾಗಳ ಇ ಹರಾಜು (ಆನ್ಲೈನ್ ಮೂಲಕ) ಪ್ರಕ್ರಿಯೆ ನಡೆಯುತ್ತಿದ್ದು, ಈ ಹರಾಜು ಪ್ರಕ್ರಿಯೆಯಲ್ಲಿ ಗುನ್ನೆ ಪ್ರಕರಣಗಳ ಕಟ್ಟಿಗೆ ದಾಸ್ತಾನುಗಳನ್ನು ಸೇರಿಸಬಾರದು ಎಂದು ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯ ಡಿ. ಸ್ಯಾಮ್ಸನ್ ಮನವಿ ಮಾಡಿದ್ದಾರೆ.
ಈ ಕುರಿತು ಮಂಗಳವಾರ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ, ದಾಂಡೇಲಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಅರಣ್ಯವಾಸಿಗಳು ಹಾಗೂ ಅರಣ್ಯದಂಚಿನಲ್ಲಿರುವ ಸ್ಥಳೀಯ ಜನರು ಮನೆ ಕಟ್ಟಿಕೊಳ್ಳಲು ಈಗ ದುಬಾರಿ ಹಣ ತೆತ್ತು ಕಟ್ಟಿಗೆ ಖರೀದಿಸಬೇಕಾದ ಸ್ಥಿತಿಯಿದೆ. ಸ್ಥಳೀಯರಿಗೂ ಮನೆ ನಿರ್ಮಿಸಿಕೊಳ್ಳಲು ರಿಯಾಯತಿ ದರದಲ್ಲಿ ಕಟ್ಟಿಗೆಗಳು ದೊರೆಯಬೇಕಾದ ಅಗತ್ಯ ಬಹಳ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ನಾಳೆಯಿಂದ ದಾಂಡೇಲಿಯಲ್ಲಿ ನಡೆಯುತ್ತಿರುವ ಇ ಹರಾಜು ಟೆಂಡರ್ ಪ್ರಕ್ರಿಯೆಯಲ್ಲಿ ಉತ್ತಮ ಹಾಗೂ ವಿವಿಧ ಜಾತಿಯ ನಾಟಾ ಲಭ್ಯವಿದ್ದು, ಗುನ್ನೆ ಪ್ರಕರಣಗಳ ಕಟ್ಟಿಗೆ ದಾಸ್ತಾನನ್ನು ಕೂಡ ಈ ಹರಾಜು ಪ್ರಕ್ರಿಯೆಯಲ್ಲಿ ಒಳಗೊಳಿಸಲಾಗಿದೆ.
ಗುನ್ನೆ ಪ್ರಕರಣಗಳ ಕಟ್ಟಿಗೆದಾಸ್ತಾನುಗಳನ್ನು ಈ ಆನ್ಲೈನ್ ಹರಾಜು ಪ್ರಕ್ರಿಯೆಯಲ್ಲಿ ಸೇರಿಸುತ್ತಿರುವುದು ಸರಿಯಾದ ಕ್ರಮವಲ್ಲ. ಈ ಹರಾಜು ಪ್ರಕ್ರಿಯೆಯ ಲಾಭವನ್ನು ಹೊರಗಿನ ಶ್ರೀಮಂತರು ಪಡೆಯುತ್ತಿದ್ದು ಸ್ಥಳೀಯರು ಇದರಿಂದ ವಂಚಿತರಾಗುತ್ತಿದ್ದಾರೆ. ಗುನ್ನೆ ಪ್ರಕರಣದ ಮಾಲ್ ಗಳನ್ನು ಮಾತ್ರ ಈ ಆನ್ಲೈನ್ ಹರಾಜು ಟೆಂಡರ್ ಪ್ರಕ್ರಿಯೆಯಿಂದ ಹೊರಗಿಟ್ಟು, ದಾಂಡೇಲಿ ಸೇರಿದಂತೆ ಸ್ಥಳೀಯವಾಗಿ ಮನೆ ಕಟ್ಟಿವವರಿಗಾಗಿ ಕೆಲವು ಮಾನದಂಡಗಳನ್ನು ನಿಗದಿಪಡಿಸಿ ಸರಕಾರಿ ರಿಯಾಯತಿ ದರದಂತೆ ಒದಗಿಸಿದರೆ ಸ್ಥಳೀಯರಿಗೆ ಪ್ರಯೋಜನವಾಗುತ್ತದೆ.
ಮಾನ್ಯ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಗಳು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.