
ಕಾರವಾರ:
ರಾಜಕೀಯದ ಲಾಭಕ್ಕಾಗಿ ಜಿಲ್ಲೆಯ ವಿಭಜನೆಯ ಕುರಿತು ಹೋರಾಟ ನಡೆಯುತ್ತಿದೆ. ಇದು ಖಂಡನೀಯ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಭಾಸ್ಕರ ಪಟಗಾರ ಹೇಳಿದ್ದಾರೆ.
ಅವರು ಕಾರವಾರದಲ್ಲಿ ಮಾತನಾಡಿ, ಜಿಲ್ಲೆಯು ಗಡಿಭಾಗವಾದ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಗಡಿ ತಾಲೂಕಾದ ಕಾರವಾರವನ್ನು ಜಿಲ್ಲಾಕೇಂದ್ರವನ್ನಾಗಿ ಮಾಡಲಾಗಿದೆ. ಹಾಗೆಯೇ ಗಡಿ ಜಿಲ್ಲೆಯಾದ ಬೆಳಗಾವಿಯನ್ನು ಎರಡನೇ ರಾಜಧಾನಿಯಾಗಿ ಮಾಡಲಾಗಿದೆ. ಹೀಗಿರುವಾದ ರಾಜಕೀಯ ಲಾಭಕ್ಕಾಗಿ ಜಿಲ್ಲೆಯನ್ನು ಒಡೆಯುವ ಹುನ್ನಾರ ನಡೆದಿದೆ. ಘಟ್ಟದಮೇಲಿನ ತಾಲೂಕುಗಳು ಅಭಿವೃದ್ಧಿ ಆಗಿಲ್ಲ ಎನ್ನುತ್ತಾರೆ. ಆದರೆ ಅಲ್ಲಿನವರೇ ಹೆಚ್ಚಿನ ಕಾಲ ಉಸ್ತುವಾರಿ ಮಂತ್ರಿಗಳಾಗಿದ್ದರು. ಈಗ ಅಭಿವೃದ್ಧಿ ಆಗಿಲ್ಲ ಎನ್ನುವುದು ಎಷ್ಟು ಸರಿ. ಜಿಲ್ಲೆಯ ಬೆಳವಣಿಗೆ, ಪ್ರವಾಸೋದ್ಯಮ ಅಭಿವೃದ್ಧಿ ಅಥವಾ ಸರಕಾರದಿಂದ ವಿಷೇಶ ಅನುದಾನಕ್ಕಾಗಿ ಹೋರಾಡಿದರೆ ನಾವು ಕೂಡ ಕೈ ಜೋಡಿಸುತ್ತೇವೆ. ಆದರೆ ರಾಜಕೀಯ ಲಾಭಕ್ಕೆ ಜಿಲ್ಲೆಯನ್ನು ವಿಭಜನೆ ಮಾಡುವ ಹೋರಾಟವನ್ನು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜಿಲ್ಲೆಯ ಜನರು ಒಕ್ಕೊರಲಿನಿಂದ ಖಂಡಿಸುತ್ತೇವೆ ಎಂದರು.