ಯಲ್ಲಾಪುರ:
ತಾಲೂಕಿನ ತಾಳೆಕುಂಬ್ರಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿಗೆ ದಿಢೀರ್ ಬೆಂಕಿ ತಗಿ ಚಾಲಕ ಸಜೀವ ದಹನಗೊಂಡಿರುವ ದುರ್ಘಟನೆ ಬುಧವಾರ ನಡೆದಿದೆ. ಮೃತ ವ್ಯಕ್ತಿ ಬೆಳಗಾವಿ ಮೂಲದ ನಿತೇಶ್ ಧಾಪಳೆ (35) ಆಗಿರುವ ಶಂಕೆ ವ್ಯಕ್ತವಾಗಿದ್ದು, ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಕಿಯ ರಭಸಕ್ಕೆ ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಕಾರಿನೊಳಗಿದ್ದ ವ್ಯಕ್ತಿಯ ದೇಹವೂ ಗುರುತಿಸಲಾಗದಷ್ಟು ಸುಟ್ಟು ಹೋಗಿದೆ. ಸ್ಥಳದಲ್ಲಿ ಕೇವಲ ಮೂಳೆ ಅವಶೇಷಗಳು ಮಾತ್ರ ಪತ್ತೆಯಾಗಿದ್ದು, ಮೃತರ ಗುರುತು ಪತ್ತೆ ಕಾರ್ಯ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ಘಟನೆಗೆ ಸಂಬಂಧಿಸಿದಂತೆ ಬೆಳಗಾವಿಯ ಕನಬರಗಿ ರಸ್ತೆಯ ಚಂದ್ರಮೌಳಿ ಕಾಲೋನಿಯ ನಿವಾಸಿ, ನಿವೃತ್ತ ನೌಕರ ಜಗನ್ನಾಥ ರಾಹು ಧಾಪಳೆ (65) ಅವರು ಯಲ್ಲಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. “ಸುಟ್ಟು ಕರಕಲಾದ ಕಾರಿನಲ್ಲಿ ಇದ್ದದ್ದು ನನ್ನ ಪುತ್ರ ನಿತೇಶ್ ಆಗಿರಬಹುದು ಅಥವಾ ಬೇರೆ ಯಾರಾದರೂ ಆಗಿರಬಹುದು. ದೇಹ ಸಂಪೂರ್ಣ ಸುಟ್ಟು ಹೋಗಿರುವುದರಿಂದ ಗುರುತು ಪತ್ತೆ ಕಷ್ಟವಾಗಿದೆ. ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಅವರು ತಮ್ಮ ದೂರಿನಲ್ಲಿ ಮನವಿ ಮಾಡಿದ್ದಾರೆ.
ಜಗನ್ನಾಥ ಧಾಪಳೆ ಅವರ ದೂರಿನ ಮೇರೆಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್-2023ರ ಕಲಂ 281 ಹಾಗೂ 106(1) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
