
ಭಟ್ಕಳ :
ಮುರುಡೇಶ್ವರದಲ್ಲಿ ಮಂಗಳವಾರ ಸಂಜೆ ಸಮುದ್ರಪಾಲಾಗಿದ್ದ ಕೋಲಾರದ ಮೂವರು ವಿದ್ಯಾರ್ಥಿನಿಯರ ಮೃತದೇಹಗಳು ಬುಧವಾರ ಪತ್ತೆಯಾಗಿವೆ.
ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲೂಕಿನ ಎಂ.ಕೊತ್ತೂರು ಗ್ರಾಮದ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯರಾದ ದೀಕ್ಷಾ ಜೆ. (15), ಲಾವಣ್ಯಾ (15), ಮತ್ತು ವಂದನಾ (15) ಮೃತಪಟ್ಟಿದ್ದಾರೆ.
ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಕಣ್ಮರೆಯಾಗಿದ್ದ ವಿದ್ಯಾರ್ಥಿನಿಯರ ಪತ್ತೆಗಾಗಿ ಕರಾವಳಿ ಕಾವಲು ಪೊಲೀಸ್ ಪಡೆಯು ಸ್ಥಳೀಯ ಮೀನುಗಾರರ ಸಹಕಾರದಲ್ಲಿ ಇಂದು ಮುಂಜಾನೆಯಿಂದ ಶೋಧ ಮುಂದುವರಿಸಿದ್ದರು. ಈ ವೇಳೆ ಮೂವರ ಮೃತದೇಹ ಪತ್ತೆಯಾಗಿದೆ. ಇವರೊಂದಿಗೆ ಸಮುದ್ರಪಾಲಾಗಿದ್ದ ಇನ್ನೋರ್ವ ವಿದ್ಯಾರ್ಥಿನಿ ಶ್ರಾವಂತಿ ಗೋಪಾಲಪ್ಪ(15) ನಿನ್ನೆ ಮೃತಪಟ್ಟಿದ್ದಳು.
ಮುರುಡೇಶ್ವರಕ್ಕೆ ಪ್ರವಾಸಕ್ಕೆಂದು ಆಗಮಿಸಿದ್ದ ವಿದ್ಯಾರ್ಥಿನಿಯರು ಸಮುದ್ರದಲ್ಲಿ ಆಟವಾಡುವ ವೇಳೆ ಅಲೆಗಳ ಹೊಡೆತಕ್ಕೆ 7 ವಿದ್ಯಾರ್ಥಿನಿಯರು ನೀರುಪಾಲಾಗಿದ್ದರು. ಈ ಪೈಕಿ ಮೂವರನ್ನು ರಕ್ಷಣೆ ಮಾಡಲಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ.