
ದಾಂಡೇಲಿ :
ನಗರದ ಕೆನರಾ ವೆಲ್ಫೇರ್ ಟ್ರಸ್ಟಿನ ಜನತಾ ವಿದ್ಯಾಲಯ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು, ಇ ನಿಟ್ಟಿನಲ್ಲಿ ಜನವರಿ ಅಂತ್ಯದೊಳಗೆ ಬೆಳ್ಳಿ ಹಬ್ಬ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಜನತಾ ವಿದ್ಯಾಲಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಅಮೃತ್ ರಾಮರಥ ಅವರು ಹೇಳಿದರು.
ಅವರು ಸೋಮವಾರ ಜನತಾ ವಿದ್ಯಾಲಯ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ 1999-2000 ಶೈಕ್ಷಣಿಕ ವರ್ಷದಲ್ಲಿ ಎಂಟು ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡ ಈ ವಿದ್ಯಾಲಯ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗೆ ಮಹೋನ್ನತ ಪಾತ್ರವನ್ನು ವಹಿಸಿದೆ. ಸಂಸ್ಥೆಯ ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ, ಶಾಲೆಯ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವರ್ಗದವರ ಸಹಕಾರದಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳನ್ನು ಸಂಘಟಿಸಿಕೊಂಡು, ಶಾಲೆಯ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಯೋಜನೆ ಯೋಚನೆಗಳೊಂದಿಗೆ ಜನವರಿ ಅಂತ್ಯದೊಳಗೆ ಶಾಲೆಯ ಬೆಳ್ಳಿ ಹಬ್ಬ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ. ಈ ಶಾಲೆಯಲ್ಲಿ ಕಲಿತು ಹೋದ ಹಳೆ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಜೊತೆಗೆ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ತುಂಬು ಹೃದಯದ ಸಹಕಾರವನ್ನು ನೀಡುವಂತೆ ಮನವಿಯನ್ನು ಮಾಡಿದರು.
ಈ ಸಂದರ್ಭದಲ್ಲಿ ಜನತಾ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೀಟಾ ಡಯಾಸ್, ಜನತಾ ವಿದ್ಯಾಲಯ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ನಂದಿನಿ ನಾಯ್ಕ, ಕೆನರಾ ವೆಲ್ಫೇರ್ ಟ್ರಸ್ಟ್ ಬಿ ಎಡ್ ಕಾಲೇಜಿನ ಪ್ರಾಚಾರ್ಯರಾದ ಸಹನಾ ಸೂರ್ಯವಂಶಿ, ಜನತಾ ವಿದ್ಯಾಲಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಬಿ.ಅರವಳ್ಳಿ, ಇ.ಎಂ.ಎಸ್ ಶಾಲೆಯ ಮುಖ್ಯೋಪಾಧ್ಯಾಯರಾದ ನಾರಾಯಣ ನಾಯ್ಕ ಉಪಸ್ಥಿತರಿದ್ದರು.