ದಾಂಡೇಲಿ: ದುಬಾರೆ ಅನಾಹುತದ ಬಳಿಕ ದಾಂಡೇಲಿ ಸಮೀಪದ ಪಣಸೋಲಿ ಆನೆ ಶಿಬಿರಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದ್ದು, ಅದರ ಪರಿಣಾಮ ಸ್ಥಳೀಯ ಪ್ರವಾಸೋದ್ಯಮ, ಸಣ್ಣ ವ್ಯಾಪಾರಿಗಳು, ಜೀಪ್ ಚಾಲಕರು, ಮಾರ್ಗದರ್ಶಕರು ಮತ್ತು ಹೋಂಸ್ಟೇ ಮಾಲೀಕರು ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ.
ಪಣಸೋಲಿ ಆನೆ ಶಿಬಿರ ಜಿಲ್ಲೆಯ ಪ್ರಮುಖ ಪ್ರಕೃತಿ ಮತ್ತು ವನ್ಯಜೀವಿ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಕಾಳಿ ಅರಣ್ಯದ ನಿಸರ್ಗ ಸೌಂದರ್ಯದ ನಡುವೆ ನೆಲೆಗೊಂಡಿರುವ ಈ ಶಿಬಿರದಲ್ಲಿ ಸಾಕಾನೆಗಳ ಆರೈಕೆ, ಸ್ನಾನ, ಆಹಾರ ವಿತರಣೆ ಮತ್ತು ತರಬೇತಿ ಕ್ರಮಗಳನ್ನು ವೀಕ್ಷಿಸಲು ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದರು. ವಿಶೇಷವಾಗಿ ಮಕ್ಕಳಿಗೆ ಆನೆಗಳನ್ನು ಸಮೀಪದಿಂದ ನೋಡುವ ಅವಕಾಶ ನೀಡುತ್ತಿದ್ದ ಈ ತಾಣ ಕುಟುಂಬ ಪ್ರವಾಸದ ಆಕರ್ಷಣೆಯಾಗಿ ರೂಪುಗೊಂಡಿತ್ತು.
ಏಕೈಕ ಪರಿಹಾರವೇ?: ವನ್ಯಜೀವಿ ತಜ್ಞರ ಪ್ರಕಾರ ಆನೆಗಳು ಅತ್ಯಂತ ಬುದ್ದಿವಂತ ಹಾಗೂ ಭಾವನಾತ್ಮಕ ಪ್ರಾಣಿಗಳು. ಅವುಗಳ ವರ್ತನೆ ಪರಿಸರ, ಶಬ್ದ, ಜನಸಂದಣಿ, ಹವಾಮಾನ ಮತ್ತು ಮಾನವನ ವರ್ತನೆಯಿಂದ ಪ್ರಭಾವಿತವಾಗುತ್ತದೆ. ವಿಶೇಷವಾಗಿ ಜನನ ಕಾಲ, ಆರೋಗ್ಯ ಸಮಸ್ಯೆ ಅಥವಾ ಮಸ್ತ್ ಸ್ಥಿತಿಯಲ್ಲಿರುವ ಗಂಡಾನೆಗಳು ಅಸಹಜವಾಗಿ ವರ್ತಿಸುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ವೈಜ್ಞಾನಿಕ ನಿರ್ವಹಣಾ ಕ್ರಮಗಳನ್ನು ಅನುಸರಿಸಿದರೆ, ಪ್ರವಾಸಿಗರ ವೀಕ್ಷಣೆಯನ್ನು ಸಂಪೂರ್ಣ ನಿಷೇಧಿಸುವ ಅಗತ್ಯವಿಲ್ಲವೆಂಬ ಅಭಿಪ್ರಾಯವನ್ನು ಅರಣ್ಯ ಮತ್ತು ವನ್ಯಜೀವಿ ಅಧ್ಯಯನ ಪರಿಣಿತರು ವ್ಯಕ್ತಪಡಿಸುತ್ತಿದ್ದಾರೆ. ದೇಶದ ಅನೇಕ ಸಂರಕ್ಷಿತ ಪ್ರದೇಶಗಳಲ್ಲಿ ನಿಯಂತ್ರಿತ ವೀಕ್ಷಣಾ ವ್ಯವಸ್ಥೆ ಯಶಸ್ವಿಯಾಗಿ ಜಾರಿಯಲ್ಲಿದೆ. ನಿಯಂತ್ರಿತ ಪ್ರವೇಶದಿಂದ ಸುರಕ್ಷತೆ ಸಾಧ್ಯ. ಪಣಸೋಲಿ ಶಿಬಿರದಲ್ಲಿ ಕೆಳಗಿನ ಕ್ರಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಿದರೆ, ಪ್ರವಾಸಿಗರಿಗೆ ಮರು ಪ್ರವೇಶ ಅವಕಾಶ ಕಲ್ಪಿಸಬಹುದಾಗಿದೆ.
ನಿರ್ವಹಣೆ ಅಗತ್ಯ: ಆನೆಗಳಿಂದ ಕನಿಷ್ಟ ಸುರಕ್ಷತಾ ಅಂತರ ಕಾಪಾಡುವದು, ಕಬ್ಬಿಣದ ಬೇಲಿ ಅಥವಾ ವೀಕ್ಷಣಾ ವೇದಿಕೆ ನಿರ್ಮಾಣ, ಒಂದೇ ಬಾರೀ ಪ್ರವೇಶಿಸುವ ಪ್ರವಾಸಿಗರ ಸಂಖ್ಯೆಗೆ ಮಿತಿ, ಮಕ್ಕಳೊಂದಿಗೆ ಬರುವ ಕುಟುಂಬಗಳಿಗೆ ಪ್ರತ್ಯೇಕ ವೀಕ್ಷಣಾ ವಲಯ ಅನುಭವಿ ಮಾವುತರು ಮತ್ತು ಅರಣ್ಯ ಸಿಬ್ಬಂದಿಯ ಕಡ್ಡಾಯ ಹಾಜರಾತಿ, ಆನೆಗಳ ಆರೋಗ್ಯ ಮತ್ತು ಮನೋಸ್ಥಿತಿ ಆಧರಿಸಿ ದಿನನಿತ್ಯ ವೀಕ್ಷಣೆಗೆ ಅನುಮತಿ, ಶಬ್ದ, ಪ್ಲಾಶ್ ಪೋಟೋಗ್ರಫಿ ಮತ್ತು ಆಹಾರ ಎಸೆಯುವಿಕೆಗೆ ನಿಷೇಧ, ಸಿ.ಸಿ ಟಿ.ವಿ ಹಾಗೂ ತುರ್ತು ಪ್ರತಿಕ್ರಿಯಾ ವ್ಯವಸ್ಥೆ ಅಳವಡಿಕೆಯಂತಹ ಕ್ರಮ ಅಗತ್ಯ. ಪಣಸೋಲಿ ಶಿಬಿರ ಕೇವಲ ಮನೋರಂಜನಾ ತಾಣವಲ್ಲ, ಇದು ಪರಿಸರ ಶಿಕ್ಷಣದ ಜೀವಂತ ಕೇಂದ್ರವಾಗುವ ಸಾಮರ್ಥ್ಯಹೊಂದಿದೆ. ಆನೆಗಳ ಜೀವನ ಶೈಲಿ, ಅರಣ್ಯ ಸಂರಕ್ಷಣೆ, ಮಾನವ-ವನ್ಯಜೀವಿ ಸಹಬಾಳ್ವೆ ಮತ್ತು ಜೀವ ವೈವಿಧ್ಯದ ಕುರಿತು ಮಕ್ಕಳಿಗೆ ನೇರ ಅರಿವು ಮೂಡಿಸಲು ಅತ್ಯುತ್ತಮ ವೇದಿಕೆಯಾಗಿದೆ. ಪರಿಸರ ತಜ್ಞರ ಅಭಿಪ್ರಾಯದಲ್ಲಿ ವನ್ಯಜೀವಿಗಳನ್ನು ದೂರದಿಂದಲೇ ಉಳಿಸಬೇಕು ಎಂಬ ಕಲ್ಪನೆಗಿಂತ ಜವಾಬ್ದಾರಿಯುತ ವೀಕ್ಷಣೆ ಹೆಚ್ಚು ಪರಿಣಾಮಕಾರಿ ಸಂರಕ್ಷಣಾ ಮನೋಭಾವ ಬೆಳೆಸುತ್ತದೆ.
ಸ್ಥಳೀಯ ಆರ್ಥಿಕತೆಗೆ ಬಿದ್ದ ಹೊಡೆತ: ದಾಂಡೇಲಿ ಭಾಗದ ಪ್ರವಾಸೋದ್ಯಮ ಬಹುತೇಕ ಕಾಳಿ ನದಿ, ಅರಣ್ಯ ಸಫಾರಿ, ಹೋಂಸ್ಟೇ ಮತ್ತು ವನ್ಯ ಜೀವಿ ಆಕರ್ಷಣೆ ಮೇಲೆ ಅವಲಂಬಿತವಾಗಿದೆ. ಪಣಸೋಲಿ ಆನೆ ಶಿಬಿರ ಪ್ರವಾಸಿಗರನ್ನು ಸೆಳೆವ ಪ್ರಮುಖ ತಾಣಗಳಲ್ಲಿ ಒಂದಾಗಿತ್ತು. ನಿರ್ಬಂಧದ ಬಳಿಕ ಸ್ಥಳೀಯ ಪ್ರವಾಸಿ ವಾಹನಗಳ ಸಂಚಾರ ಕುಂಠಿತವಾಗಿದ್ದು ಸಣ್ಣ ವ್ಯಾಪಾರಿಗಳ ಆದಾಯ ಕುಸಿದಿದೆ. ಸ್ಥಳೀಯ ಉದ್ಯಮಿಗಳ ಪ್ರಕಾರ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲಿ. ಆದರೆ ಸಂಪೂರ್ಣ ನಿರ್ಬಂಧದಿಂದ ಪ್ರವಾಸೊದ್ಯಮಕ್ಕೆ ಶಾಶ್ವತ ಹಾನಿಯಾಗಬಾರದು. ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಪರಿಸ್ಥಿತಿಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಅರಣ್ಯ ಇಲಾಖೆ, ವನ್ಯ ಜೀವಿ ತಜ್ಞರು ಪಶುವೈದ್ಯರು, ಸ್ಥಳೀಯ ಆಡಳಿತ ಮತ್ತು ಪ್ರವಾಸೋದ್ಯಮ ಪ್ರತಿನಿಧಿಗಳನ್ನು ಒಳಗೊಂಡ ತಜ್ಞ ಸಮಿತಿ ರಚಿಸಿ ಸುರಕ್ಷತಾ ಮಾರ್ಗಸೂಚಿ ರೂಪಿಸುವ ಅಗತ್ಯವಿದೆಯೆನ್ನಲಾಗುತ್ತಿದೆ.
