ಜೋಯಿಡಾ:
ಗಿಡಮರ, ಪ್ರಾಣಿ ಮತ್ತು ಪಕ್ಷಿಗಳನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಕಾಡಿನಿಂದಲೇ ನಮಗೆ ಸಕಾಲದಲ್ಲಿ ಮಳೆ, ಉತ್ತಮ ಬೆಳೆ ಹಾಗೂ ಜೀವವಾಯು ಸಿಗುತ್ತದೆ. ಪ್ರವಾಸಿಗರು ಮತ್ತು ಭಕ್ತರು ಪ್ಲಾಸ್ಟಿಕ್ ಹಾಗೂ ಇನ್ನಿತರ ಕಸಗಳನ್ನು ಕಾಡಿನಲ್ಲಿ ಎಲ್ಲೆಂದರಲ್ಲಿ ಎಸೆದು ಪರಿಸರ ಮಾಲಿನ್ಯ ಮಾಡಬಾರದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ನಿಲೇಶ ಶಿಂಧೆ ಅವರು ಕರೆ ನೀಡಿದರು. ತಾಲೂಕಿನ ಉಳವಿಯಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ 72 ನೇ ವನ್ಯಜೀವಿ ಸಪ್ತಾಹಕ್ಕೆ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ಉಳವಿ ದೇವಸ್ಥಾನದಿಂದ ವೀರಭದ್ರೇಶ್ವರ ಕೆರೆಯವರೆಗೆ ವನ್ಯಜೀವಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಭವ್ಯ ಜಾತ ಹಾಗೂ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ದಾಂಡೇಲಿ ವಲಯದ ಎಸಿಎಫ್ ಸಂಕೇತ, ಗುಂದ ವಲಯ ಅರಣ್ಯಾಧಿಕಾರಿ ವಿಜಯಕುಮಾರ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಅರಣ್ಯ ಇಲಾಖೆ ಕಾರ್ಯಕ್ರಮದಲ್ಲಿ ಸ್ಥಳೀಯರ ಗೈರುಹಾಜರಿ: ಸಾರ್ವಜನಿಕರ ಅಸಮಾಧಾನ
ಪ್ರತಿ ವರ್ಷ ವನ್ಯಜೀವಿ ಸಪ್ತಾಹದಲ್ಲಿ ಸ್ಥಳೀಯರ ಮುಂದಾಳತ್ವ ಮತ್ತು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯುತ್ತಿತ್ತು. ಆದರೆ ಈ ಬಾರಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು, ಹಿರಿಯ ವ್ಯಕ್ತಿಗಳು ಹಾಗೂ ಗ್ರಾಮದ ಪ್ರಮುಖರು ಯಾರೂ ಕಾಣಿಸಿಕೊಳ್ಳದಿರುವುದು ಸಾರ್ವಜನಿಕರ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಸ್ಥಳೀಯರಿಗೆ ಯಾವುದೇ ಮುನ್ಸೂಚನೆ ಅಥವಾ ಮಾಹಿತಿ ನೀಡಿಲ್ಲವೇ ಎಂಬ ಪ್ರಶ್ನೆ ಮೂಡಿದೆ. ಇಲಾಖೆಯ ಸಿಬ್ಬಂದಿಗಳನ್ನು ಹೊರತುಪಡಿಸಿದರೆ ಗ್ರಾಮಸ್ಥರು ಯಾರೂ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.
ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದಾಗ, “ಪ್ರಸ್ತುತ ಚುನಾವಣೆ ಇರುವುದರಿಂದ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಕಾರಣದಿಂದಾಗಿ ಸಾರ್ವಜನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಲು ಸಾಧ್ಯವಾಗಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ಸ್ಥಳೀಯರಿಗೆ ಮತ್ತು ಸಾಮಾನ್ಯ ಜನರಿಗೆ ಕಾಡು ಹಾಗೂ ವನ್ಯಜೀವಿಗಳ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಡುವುದೇ ಈ ಸಪ್ತಾಹದ ಮುಖ್ಯ ಉದ್ದೇಶವಾಗಿದೆ.
