
ದಾಂಡೇಲಿ : ಸ್ಲೋ ಮೋಟರ್ ಸೈಕಲ್ ರೇಸ್ ನ ಸ್ಲೋ ಬೈಕ್ ರೇಸಿನಲ್ಲಿ ರಾಷ್ಟ್ರಮಟ್ಟದಲ್ಲಿ ದಾಂಡೇಲಿಗೆ ಪ್ರಪ್ರಥಮ ಬಹುಮಾನ ಬರಬೇಕಿತ್ತು. ಆದರೆ ಅದೃಷ್ಟ ಮಾತ್ರ ಅದಕ್ಕೆ ಅವಕಾಶವನ್ನು ನೀಡಲಿಲ್ಲ. ಪರಿಣಾಮವಾಗಿ ದಾಂಡೇಲಿಯ ಸ್ಪರ್ಧಿ ಗೆದ್ದು ಸೋಲನ್ನು ಒಪ್ಪಿಕೊಳ್ಳಬೇಕಾಯಿತು.
ಇದು ಗೋವಾದಲ್ಲಿ ನಡೆದ ರಾಷ್ಟ್ರೀಯ ಮೋಟರ್ ಸೈಕಲ್ ರೇಸಿನಲ್ಲಿ ದಾಂಡೇಲಿಯ ಉದ್ಯಮಿ ಹಾಗೂ ಪ್ರೇಮ್ ವುಡ್ ಇಂಡಸ್ಟ್ರೀಸ್ ಮಾಲಕರು ಮತ್ತು ಕ್ರೀಡಾಪಟುವಾಗಿರುವ ಪ್ರೇಮಾನಂದ ಗವಸ ಅವರು ಭಾಗವಹಿಸಿದ್ದರು. ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಯ ಸ್ಲೋ ಮೋಟರ್ ಸೈಕಲ್ ರೇಸ್ ವಿಭಾಗದಲ್ಲಿ ಭಾಗವಹಿಸಿದ್ದ ಪ್ರೇಮಾನಂದ ಗವಸ್ ಅವರು ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆಯಬೇಕಿತ್ತು. ಚಾಕಚಾಕ್ಯತೆಯಿಂದ ತನ್ನ ಬುಲ್ಲೆಟ್ ಬೈಕನ್ನು ನಿಧಾನಗತಿಯಲ್ಲಿ ಓಡಿಸಿದ ಪ್ರೇಮಾನಂದ ಗವಸ್ ಅವರು ಮಿಕ್ಕುಳಿದ ಎಲ್ಲ ಸ್ಪರ್ಧಿಗಳು ಮುಂದೆ ಹೋಗಿದ್ದರು. ಇದನ್ನು ನೋಡಿದ ತಕ್ಷಣ, ತಾನು ಗೆಲುವು ಸಾಧಿಸಿದೆ ಎಂಬ ಸಂತಸದಲ್ಲಿ, ಅಂತಿಮ ಗೆರೆಯ ಹತ್ತಿರ ಕಾಲನ್ನು ಕೆಳಗಿಟ್ಟು, ಗೆಲುವಿನ ಸಂಭ್ರಮವನ್ನು ತನ್ನದಾಗಿಸಿಕೊಂಡರು. ಸ್ಲೋ ಬೈಕ್ ರೇಸ್ ನಲ್ಲಿ ಎಲ್ಲರೂ ಹೋದ ನಂತರ ಉಳಿದವರು ಪ್ರೇಮಾನಂದ ಗವಸ ಒಬ್ಬರೇ ಆಗಿದ್ದರು. ಹಾಗಾಗಿ ಬಹುಮಾನ ಅವರಿಗೆ ಕೊಡಬೇಕಿತ್ತು. ಈ ಬಗ್ಗೆ ಕೆಲ ಹೊತ್ತು ತೀರ್ಪುಗಾರರ ನಡುವೆ ಚರ್ಚೆಯು ನಡೆಯಿತು. ಆದರೆ ಅಂತಿಮ ಗೆರೆಯನ್ನು ದಾಟಿದ ನಂತರವೇ ನೆಲಕ್ಕೆ ಕಾಲಿಡಬೇಕೆಂಬ ನಿಯಮವು ಪ್ರೇಮಾನಂದ ಗವಸ್ ಅವರ ಚಾಂಪಿಯನ್ ಪಟ್ಟಕ್ಕೆ ಮುಳ್ಳಾಗಿ ಪರಿಣಮಿಸಿತು. ಈ ನಿಯಮ ಅಲ್ಲಿದ್ದ ಎಲ್ಲರಗೂ ಬೇಸರವನ್ನು ತಂದೊಡ್ಡಿತ್ತು. ಅನಿವಾರ್ಯವಾಗಿ ಪ್ರೇಮಾನಂದ ಗವಸ ಅವರು ಗೆದ್ದು ಸೋಲನ್ನು ಒಪ್ಪಿಕೊಳ್ಳಬೇಕಾಯಿತು.
ರಾಷ್ಟ್ರದ ವಿವಿದೆಡೆಗಳ ಒಟ್ಟು 80 ಸಾವಿರ ಮೋಟಾರ್ ಬೈಕುಗಳು ವಿವಿಧ ವಿಭಾಗಗಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಈ ಹಿಂದೆಯೂ ಪ್ರೇಮಾನಂದ ಗವಸ ಅವರು ಕಮಲ್ ಕಪ್, ವಿಜಯ ಕರ್ನಾಟಕ ಕಪ್ ಹೀಗೆ ಸಾಕಷ್ಟು ಮೋಟಾರ್ ಬೈಕ್ ರೇಸ್ ನಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.