ಕಾರವಾರ ಉಪವಿಭಾಗದಲ್ಲಿ ಚಾಕಚಕ್ಯತೆಯ ಸೇವೆ; ಉಡುಪಿ ಕರಾವಳಿ ಕಾವಲು ಪಡೆಗೆ ವರ್ಗಾವಣೆ
ಕಾರವಾರ: ಕಾರವಾರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾಗಿ ಕಳೆದ ಎರಡುವರೆ ವರ್ಷಕ್ಕೂ ಹೆಚ್ಚು ಕಾಲ ಉತ್ತಮ ಸೇವೆ ಸಲ್ಲಿಸಿ, ಇದೀಗ ಉಡುಪಿಯ ಕರಾವಳಿ ಕಾವಲು ಪೊಲೀಸ್ ವಿಭಾಗಕ್ಕೆ ವರ್ಗಾವಣೆಗೊಂಡಿರುವ ಡಿವೈಎಸ್ಪಿ ಗಿರೀಶ್ ಅವರನ್ನು ಜನಶಕ್ತಿ ವೇದಿಕೆಯ ವತಿಯಿಂದ ಅತ್ಯಂತ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯ್ಕ ಅವರ ನೇತೃತ್ವದಲ್ಲಿ ವೇದಿಕೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಡಿವೈಎಸ್ಪಿ ಗಿರೀಶ್ ಅವರನ್ನು ಭೇಟಿ ಮಾಡಿ ಗೌರವಿಸಿದರು. ಈ ಸಂದರ್ಭದಲ್ಲಿ ಅವರಿಗೆ ತಿರಂಗಾ ಪೇಟಾ ತೊಡಿಸಿ, ಶಾಲು–ಹಾರ ಹಾಕಿ, ಪುಸ್ತಕವನ್ನು ನೀಡಿ ಸನ್ಮಾನಿಸಲಾಯಿತು. ಅವರ ಕರ್ತವ್ಯನಿಷ್ಠೆ, ಜನಸ್ನೇಹಿ ನಡೆ ಹಾಗೂ ಪ್ರಕರಣಗಳನ್ನು ಚಾಕಚಕ್ಯತೆಯಿಂದ ನಿಭಾಯಿಸಿದ ಕಾರ್ಯವೈಖರಿಯನ್ನು ಸದಸ್ಯರು ಶ್ಲಾಘಿಸಿ, ಮುಂದಿನ ಸೇವಾ ಜೀವನಕ್ಕೆ ಶುಭ ಹಾರೈಸಿದರು.
ಡಿವೈಎಸ್ಪಿ ಗಿರೀಶ್ ಅವರು ಈ ಹಿಂದೆ ಕೂಡ ಕಾರವಾರದಲ್ಲಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ. 2016–18ರ ಅವಧಿಯಲ್ಲಿಯೂ ಕಾರವಾರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಯಲ್ಲಿಯೂ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಪೊಲೀಸ್ ಉಪಾದೀಕ್ಷಕರಾಗಿ ಸೇವೆ ಸಲ್ಲಿಸಿ ಮತ್ತೆ ಕಾರವಾರ ಉಪವಿಭಾಗಕ್ಕೆ ಆಗಮಿಸಿದ ಬಳಿಕ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ವಿವಿಧ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುವಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ ಎಂದು ಜನಶಕ್ತಿ ವೇದಿಕೆಯ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ ಎರಡುವರೆ ವರ್ಷಕ್ಕೂ ಹೆಚ್ಚು ಅವಧಿಯಲ್ಲಿ ಸಾರ್ವಜನಿಕರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದ ಅವರು, ಯಾವುದೇ ಪ್ರಕರಣ ಎದುರಾದರೂ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ, ಕಾನೂನುಬದ್ಧವಾಗಿ ಹಾಗೂ ಚಾಕಚಕ್ಯತೆಯಿಂದ ನಿರ್ವಹಿಸುತ್ತಿದ್ದರು. ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ ನಿರ್ಮಿಸುವಲ್ಲಿಯೂ ಅವರ ಕಾರ್ಯವೈಖರಿ ಗಮನ ಸೆಳೆದಿದೆ ಎಂದು ಸದಸ್ಯರು ಹೇಳಿದರು.
ಈ ಸಂದರ್ಭದಲ್ಲಿ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ಕನ್ನಡ ಸಾಹಿತ್ಯ ಪರಿಷತ್ ಕಾರವಾರ ತಾಲ್ಲೂಕು ಅಧ್ಯಕ್ಷ ರಾಮಾ ನಾಯ್ಕ, ಜನಶಕ್ತಿ ವೇದಿಕೆಯ ಪದಾಧಿಕಾರಿ ಬಾಬು ಶೇಖ್, ಸುರೇಶ್ ನಾಯ್ಕ, ಸಿ.ಎನ್. ನಾಯ್ಕ, ರಾಜೇಶ್ ಬಾಡ್ಕರ್, ರತ್ನಾಕರ್ ಬಾಡ್ಕರ್, ಶಿವಾನಂದ ನಾಯ್ಕ, ಸೇರಿದಂತೆ ಹಲವರು ಉಪಸ್ಥಿತರಿದ್ದು, ಡಿವೈಎಸ್ಪಿ ಗಿರೀಶ್ ಅವರಿಗೆ ಶುಭ ಹಾರೈಸಿದರು.
