ದಾಂಡೇಲಿ: ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ನಾಲ್ಕು ಕಾರ್ಮಿಕ ವಿರೋಧಿ ಮಸೂದೆಗಳು ಕಾರ್ಮಿಕರ ಹಕ್ಕು ಕಿತ್ತುಕೊಳ್ಳುವ ಹುನ್ನಾರವಾಗಿದೆ. ಕಾರ್ಮಿಕ ಪರಿಷ್ಕೃತ ಕನಿಷ್ಠ ವೇತನ ಜಾರಿ ಮಾಡಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೆ ತರಲು ಮೀನಾಮೇಷ ಎಣಿಸುತ್ತಿರುವ ಬಂಡವಾಳಶಾಹಿಗಳಿಗೆ ಸರ್ಕಾರ ನೀತಿ ಖಂಡನೀಯವಾಗಿದೆ ಎಂದು ಸಿಐಟಿಯುನ ರಾಜ್ಯ ಅಧ್ಯಕ್ಷ ಎಂ.ಎಸ್. ಮೀನಾಕ್ಷಿ ಸುಂದರಂ ಹೇಳಿದರು.
ಸಿಐಟಿಯು ಹಾಗೂ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಎಂಪ್ಲೋಯೀಸ್ ಯೂನಿಯನ್ ವತಿಯಿಂದ ಕಾರ್ಮಿಕ ಹಿತ ರಕ್ಷಣೆಗಾಗಿ ನಗರದಲ್ಲಿ ಶುಕ್ರವಾರ ಎಲ್ ಐ ಸಿ ಕಚೇರಿ ಮುಂಭಾಗದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಇ ಎಸ್ ಐ ,ಪಿಎಫ್ ಹಾಗೂ ಸಾಮಾಜಿಕ ಭದ್ರತೆ
ಖಾತರಿ,ಗುತ್ತಿಗೆ-ಹೊರಗುತ್ತಿಗೆ ಪದ್ಧತಿ ರದ್ದು ಮತ್ತು ಕಾರ್ಮಿಕರ ಖಾಯಂ ಗೊಳಿಸುವಿಕೆ, ಕೈಗಾರಿಕೆಯಲ್ಲಿ ಉದ್ಯೋಗ ಕಡಿತ ತಡೆ ಹಾಗೂ ಸ್ಥಳೀಯ ಯುವಜನರಿಗೆ ಉದ್ಯೋಗ, ಕೈಗೆಟುಕುವ ವಸತಿ ಮತ್ತು ಆರೋಗ್ಯ ಸೌಲಭ್ಯ, ಕಾರ್ಮಿಕ ಸಂಹಿತೆ ತಿರಸ್ಕಾರ ಹಾಗೂ ಕಾರ್ಮಿಕ ಕಾನೂನುಗಳ ಜಾರಿ, ಕೆಲಸದ ಸ್ಥಳಗಳಲ್ಲಿ ಸುರಕ್ಷತೆ ಮತ್ತು ಅಪಘಾತ ಪರಿಹಾರ, ಬೆಲೆ ಏರಿಕೆ ನಿಯಂತ್ರಿಸಿ ಕಾರ್ಮಿಕ ಇಲಾಖೆಯ ಬಲವರ್ಧನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿ,ಈ ಹೋರಾಟ ದಾಂಡೇಲಿಯ ಸರ್ವಾಂಗೀಣ ಅಭಿವೃದ್ಧಿಗಾಗಿ ಹಾಗೂ ಕಾರ್ಮಿಕ ಮಕ್ಕಳ ಭವಿಷ್ಯಕ್ಕಾಗಿದೆ ಎಂದರು.
ಸಿಐಟಿಯು ಜಿಲ್ಲಾ ಸದಸ್ಯ ಯಮುನಾ ಗಾಂವ್ಕರ್ ಮಾತನಾಡಿ ಕಾರ್ಮಿಕ ಸಮಸ್ಯೆಗಳ ಅರಿವಿಗಾಗಿ, ಪರಿಹಾರದ ಪ್ರಯತ್ನಗಳ ಮಾಹಿತಿಗಾಗಿ ಮತ್ತು ಮುಂದಿನ ಹೋರಾಟದ ಜಾಗೃತಿಗಾಗಿ ಈ ಬಹಿರಂಗ ಸಭೆ ಕಾರ್ಮಿಕರಿಗೆ ನ್ಯಾಯಯುತ ಪರಿಹಾರ ನೀಡುವಸಲುವಾಗಿ ಎಂದರು. ಈ ಸಂದರ್ಭದಲ್ಲಿ ಸಿಐಟಿಯು ನ ತಾಲ್ಲೂಕು ಸಂಚಾಲಕ ಸಲೀಂ ಸೈಯದ್, ಡಿ. ಸ್ಯಾಮ್ಸನ್ ಜನವಾದಿ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಮಿಕರು ಇದ್ದರು.
