
ದಾಂಡೇಲಿ : ನಾವು ನಮ್ಮ ಮಕ್ಕಳುಗಳಿಗೆ
ನೆರೆಯವರನ್ನ ಪ್ರೀತಿಸುವುದು ಕಲಿಸುತ್ತಿಲ್ಲ. ಪರಸ್ಪರ ಸಂಬಂಧಗಳನ್ನು ಬೆಸೆಯುವ ಬೀಜವನ್ನು ಬಿತ್ತುತ್ತಿಲ್ಲ. ಮನುಷ್ಯ ಸಂಬಂಧಗಳಿಗೆ ನಮ್ಮ ಕೈಯ್ಯಾರ ನಾವೇ ಕದವಿಟ್ಟುಕೊಂಡಿದ್ದೇವೆ ಎಂದು ಹಿರಿಯ ಸಾಹಿತಿ ಧಾರವಾಡದ ಪ್ರಜ್ಞಾ ಮತ್ತಿಹಳ್ಳಿ ನುಡಿದರು.
ಅವರು ಆಲೂರಿನಲ್ಲಿ ನಡೆದ ದಾಂಡೇಲಿ ತಾಲೂಕಾ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು..
ತಹಶೀಲ್ದಾರ ಶೈಲೇಶ ಪರಮಾನಂದ ಮಾತನಾಡಿ ಆಲೂರು ಎಂಬ ಗ್ರಾಮೀಣ ಭಾಗದಲ್ಲಿ ನಡೆದ ದಾಂಡೇಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲಾ ಮಟ್ಟದ ಸಮ್ಮೇಳನಕ್ಕೆ ಕಡಿಮೆ ಇಲ್ಲದ ರೀತಿಯಲ್ಲಿ ನಡೆದಿದೆ. ಸಾಹಿತ್ಯ ಜೀವನ ಪ್ರೀತಿಯನ್ನು ಕೊಡುವ ಕೆಲಸ ಮಾಡುತ್ತದೆ ಎಂದರು.
ಸಮ್ಮೇಳನಾಧ್ಯಕ್ಷರಾದ ಯು.ಎಸ್. ಪಾಟೀಲ ಮಾತನಾಡಿ ಮನುಷ್ಯನಿಗೆ ಬಾಹ್ಯವಾದ ಸೌಂದರ್ಯಕ್ಕಿಂತ ಅಂತರಂಗದ ಸೌಂದರ್ಯವೇ ಮುಖ್ಯವಾದುದು. ಪ್ರತಿಯೊಬ್ಬ ಮನುಷ್ಯನಿಗೂ ಮುಖ ಸೌಂದರ್ಯಕ್ಕಿಂತ ಮನಸ್ಸಿನ ಸೌಂದರ್ಯವೇ ಮಹತ್ವವಾದುದು. ವಿಶ್ವದ ನಕಾಶೆಯಲ್ಲಿ ಪ್ರಮುಖ ಪ್ರವಾಸಿ ಕೇಂದ್ರವಾಗಿ ಗುರುತಿಸಿಕೊಂಡಿರುವ ದಾಂಡೇಲಿಗೆ ವಿಶೇಷ ಪ್ಯಾಕೇಜ ಘೋಷಣೆ ಮಾಡಬೇಕು. ಗ್ರಾಮೀಣ ಭಾಗದ ರಸ್ತೆ ಹಾಗೂ ಇತರ ಸೌಕರ್ಯಗಳಿಗೆ ಹೆಚ್ಚಿನ ಆಧ್ಯತೆ ನೀಡಬೇಕು. ಕೆಲಸ ನೀಡುವ ಉದ್ಯಮಗಳನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಿದರು.
ಆಲೂರಿನ ಗ್ರಾಮ ಪಂಚಾಯತ ಉಪಾಧ್ಯಕ್ಷ ನೂರಜಹಾನ ನದಾಪ್ , ತಾಲೂಕ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಟಿ.ಸಿ. ಹಾದಿಮನಿ, ಗ್ರಾಮ ಪಂಚಾಯತದ ಉಪಾಧ್ಯಕ್ಷೆ ನಾಗರತ್ನ ನಾಯ್ಕ, ನಗರಸಭಾ ಉಪಾಧ್ಯಕ್ಷೆ ಶಿಲ್ಪಾ ಕೋಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಚೌಹಾಣ್, ವೆಸ್ಟ್ ಕೋಸ್ಟ್ ಪೇಪರ್ ಮಿಲನ ಸಾರ್ವಜನಿಕ ಸಂಪರ್ಕಾಧಿಕಾರಿ ರಾಘವೇಂದ್ರ ಜೆ.ಆರ್., ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಾಮನ ಮಿರಾಶಿ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಮುರ್ತುಜಾ ಹುಸೇನ್ ಆನೆಹೊಸೂರ್ ಶುಭಾಶಯ ಕೋರಿ ಮಾತನಾಡಿದರು.
ಆಶಯ ನುಡಿಗಳನ್ನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಎನ್. ವಾಸರೆ ಆಲೂರು ಇದು ಮರಾಠಿ ಬಂಧುಗಳೇ ಬಹು ಸಂಖ್ಯಾತರಿರುವ ಊರಾಗಿದ್ದರು ಕೂಡ ಅವರ ಕನ್ನಡದ ಪ್ರೀತಿ ಇಡೀ ದೇಶಕ್ಕೆ ಮಾದರಿಯಾದದ್ದು ಎಂದರು.
ದಾಂಡೇಲಿ ಕಸಾಪ ಅಧ್ಯಕ್ಷ ನಾರಾಯಣ ನಾಯ್ಕ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ ಸಂದೇಶ ವಾಚಿಸಿದರು. ನಾಗೇಶ ಆರ್. ನಾಯ್ಕ್ ವೇದಿಕೆ ಮತ್ತು ದ್ವಾರಗಳನ್ನು ಪರಿಚಯಿಸಿದರು. ಉಪನ್ಯಾಸಕ ಎನ್.ವಿ. ಪಾಟೀಲ್ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಗೌರವ ಕಾರ್ಯದರ್ಶಿ ಪ್ರವೀಣ್ ನಾಯ್ಕ ವಂದಿಸಿದರು. ಆಶಾ ದೇಶಭಂಡಾರಿ ಹಾಗೂ ಸುಭಾಷ್ ನಾಯಕ ಕಾರ್ಯಕ್ರಮ ನಿರೂಪಿಸಿದರು.