ಕಾರವಾರ: ಭಾರತೀಯ ನೌಕಾಪಡೆಯ ಮೊದಲ ಸ್ವದೇಶಿ ನಿರ್ಮಿತ ಬಹು ಉದ್ದೇಶದ ನೌಕೆ “ಐಎನ್ಎಸ್ ಸಮರ್ಥಕ್” ವಿಕಸಿತ ಭಾರತ ಮತ್ತು ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಹೆಚ್ಚಿನ ಬಲ ನೀಡಿದೆ ಎಂದು ಭಾರತದ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್
ಹೇಳಿದರು. ಅವರು ಶುಕ್ರವಾರ ಕಾರವಾರದ ಕದಂಬ ನೌಕಾನೆಲೆಯಲ್ಲಿ ಐಎನ್ಎಸ್ ಸಮರ್ಥಕ್ನ್ನು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಿ ಮಾತನಾಡಿದರು.
ಐಎನ್ಎಸ್ ಸಮರ್ಥಕ್ ಸೇರ್ಪಡೆಯು ರಕ್ಷಣಾ ಉತ್ಪಾದನೆಯಲ್ಲಿ ಭಾರತದ ಸ್ವಾವಲಂಬನೆ ಹಾಗೂ ಅತ್ಯಾಧುನಿಕ ಸ್ವದೇಶಿ ನೌಕಾ ಸಾಮರ್ಥ್ಯಗಳ ಅಭಿವೃದ್ಧಿಯ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಶೇ.75ಕ್ಕೂ ಅಧಿಕ ಸ್ವದೇಶಿ ಘಟಕಗಳನ್ನು ಹೊಂದಿರುವ ಈ ನೌಕೆಯು, ಭಾರತದ ಕೈಗಾರಿಕಾ, ತಾಂತ್ರಿಕ ಮತ್ತು ಹಡಗು ನಿರ್ಮಾಣ ಸಾಮರ್ಥ್ಯದ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ. ರಕ್ಷಣಾ ಕ್ಷೇತ್ರದ ಸ್ವಾವಲಂಬನೆಯು ಇನ್ನು ಕೇವಲ ಆಶಯವಾಗಿ ಉಳಿಯದೇ ವಾಸ್ತವವಾಗಿ ಸಾಕಾರಗೊಳ್ಳುತ್ತಿದೆ. ಪ್ರಧಾನಿ ಅವರ ವಿಕಸಿತ ಭಾರತ ಮತ್ತು ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಇದು ಬಲ ನೀಡಿದೆ ಎಂದು ಉಪರಾಷ್ಟçಪತಿ ಹೇಳಿದರು.
ಭಾರತದ ಶ್ರೀಮಂತ ಸಮುದ್ರ ಪರಂಪರೆಯನ್ನು ಸ್ಮರಿಸಿದ ಅವರು, ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಚೋಳರ ನೌಕಾ ಪರಂಪರೆಯು ಹಿಂದೂ ಮಹಾಸಾಗರ ಹಾಗೂ ಆಗ್ನೇಯ ಏಷ್ಯಾದಲ್ಲಿ ಭಾರತದ ಸಮುದ್ರ ಪ್ರಭಾವವನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂದರು.
ದೇಶದ ಸಾರ್ವಭೌಮತ್ವ ಮತ್ತು ಸಮುದ್ರ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಭಾರತೀಯ ನೌಕಾಪಡೆಯ ಸೇವೆಯನ್ನು ಶ್ಲಾಘಿಸಿದ ಅವರು, ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆ, ಭಾರತೀಯ ನಾಗರಿಕರ ಸ್ಥಳಾಂತರ, ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಕಾರ್ಯಗಳಲ್ಲಿ ನೌಕಾಪಡೆಯ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಐಎನ್ಎಸ್ ಸಮರ್ಥಕ್ ಮುಂದಿನ ಪೀಳಿಗೆಯ ಶಸ್ತ್ರಾಸ್ತ್ರಗಳು, ಸಂವೇದಕಗಳು ಹಾಗೂ ಹೊಸ ತಂತ್ರಜ್ಞಾನಗಳ ಪರೀಕ್ಷೆ ಮತ್ತು ಮೌಲ್ಯಮಾಪನಕ್ಕೆ ಬಹುಮುಖ ವೇದಿಕೆಯಾಗಲಿದೆ. ಸಮುದ್ರ ಕಣ್ಗಾವಲು, ವಿಚಕ್ಷಣ, ಗಸ್ತು, ಮಾನವರಹಿತ ವ್ಯವಸ್ಥೆಗಳ ಕಾರ್ಯಾಚರಣೆ ಹಾಗೂ ವಿಪತ್ತು ಪರಿಹಾರ ಕಾರ್ಯಗಳಿಗೂ ಈ ನೌಕೆಯ ಸಾಮರ್ಥ್ಯವನ್ನು ಬಳಸಿಕೊಳ್ಳಬಹುದು ಎಂದರು.
ಕಾರವಾರದ ಆಳವಾದ ನೈಸರ್ಗಿಕ ಬಂದರು ಮತ್ತು ಅರಬ್ಬಿ ಸಮುದ್ರಕ್ಕೆ ಇರುವ ಸಮೀಪತೆಯು ಭಾರತದ ಸಮುದ್ರ ಭದ್ರತೆಯಲ್ಲಿ ಈ ಪ್ರದೇಶಕ್ಕೆ ವಿಶೇಷ ಮಹತ್ವ ನೀಡಿದೆ. ಪ್ರಾಜೆಕ್ಟ್ ಸೀಬರ್ಡ್ ಅಡಿಯಲ್ಲಿ ಆಧುನಿಕ ನೌಕಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯ ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ನೆಲೆಗೊಳಿಸಲು ಸಾಧ್ಯವಾಗಲಿದೆ. ಈ ಯೋಜನೆಯು ಸ್ಥಳೀಯ ಆರ್ಥಿಕ ಬೆಳವಣಿಗೆಗೂ ಅವಕಾಶ ಕಲ್ಪಿಸಲಿದೆ ಎಂದು ಉಪರಾಷ್ಟçಪತಿ ಹೇಳಿದರು.
ಭಾರತೀಯ ನೌಕಾಪಡೆ, ರಕ್ಷಣಾ ಸಾರ್ವಜನಿಕ ವಲಯದ ಸಂಸ್ಥೆಗಳು, ಖಾಸಗಿ ಹಡಗು ನಿರ್ಮಾಣ ಉದ್ಯಮಗಳು, ಡಿಆರ್ಡಿಒ, ಶೈಕ್ಷಣಿಕ ಸಂಸ್ಥೆಗಳು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ನವೋದ್ಯಮಗಳ ನಡುವಿನ ಸಹಕಾರವು ದೇಶದ ರಕ್ಷಣಾ ಉತ್ಪಾದನಾ ವ್ಯವಸ್ಥೆಯನ್ನು ಬಲಪಡಿಸುತ್ತಿದೆ. ನೌಕೆಯ ನಿರ್ಮಾಣಕ್ಕೆ ಕೊಡುಗೆ ನೀಡಿದ ಎಲ್ ಆ್ಯಂಡ್ ಟಿ ಸಂಸ್ಥೆ ಹಾಗೂ ಎಂಜಿನಿಯರ್ಗಳು, ತಂತ್ರಜ್ಞರು ಮತ್ತು ಇತರ ಸಿಬ್ಬಂದಿಯ ಕಾರ್ಯವನ್ನು ಅವರು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಲಾಡ್, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್, ಪಶ್ಚಿಮ ನೌಕಾ ಕಮಾಂಡ್ ನ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ವೈಸ್ ಅಡ್ಮಿರಲ್ ಸಂಜಯ್ ವತ್ಸಾಯನ್, ಕಂಟ್ರೋಲರ್ ಆಫ್ ವಾರ್ಷಿಪ್ ಪ್ರೊಡಕ್ಷನ್ ಅಂಡ್ ಅಕ್ವಿಸಿಷನ್ ನ ವೈಸ್ ಅಡ್ಮಿರಲ್ ಸಂಜಯ್ ಸಾಧು, ಕರ್ನಾಟಕದ ಫ್ಲ್ಯಾಗ್ ಆಫೀಸರ್ ಕಮಾಂಡಿAಗ್ ರಿಯರ್ ಅಡ್ಮಿರಲ್ ವಿಕ್ರಮ್ ಮೆನನ್, ಎಲ್ ಆ್ಯಂಡ್ ಟಿ ಹಡಗು ನಿರ್ಮಾಣ ವಿಭಾಗದ ಮುಖ್ಯಸ್ಥ ನಿವೃತ್ತ ರಿಯರ್ ಅಡ್ಮಿರಲ್ ಜಿ.ಕೆ. ಹರೀಶ್, ಐಎನ್ಎಸ್ ಸಮರ್ಥಕ್ನ ಕಮಾಂಡಿಂಗ್ ಆಫೀಸರ್ ಕಮಾಂಡರ್ ಸುಶೀಲ್ ಕುಮಾರ್ ಸಿಂಗ್, ಸೇರಿದಂತೆ ನೌಕಾಪಡೆ ಹಾಗೂ ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
