ಕಾರವಾರ: ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಕಾರು ತಡೆದು ಓರ್ವನನ್ನು ಬಂಧಿಸಿರುವ ಅಬಕಾರಿ ಅಧಿಕಾರಿಗಳು, ಮತ್ತೊಂದೆಡೆ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 179.640 ಲೀಟರ್ ಮದ್ಯ ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಅಕ್ರಮ ಮದ್ಯ ಸಾಗಾಟ ಮತ್ತು ಸಂಗ್ರಹಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ.
ಶನಿವಾರ ಮಾಜಾಳಿ ಅಬಕಾರಿ ತನಿಖಾ ಠಾಣೆ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಗೋವಾದಿಂದ ಕಾರವಾರದತ್ತ ಬರುತ್ತಿದ್ದ ಮಾರುತಿ ಸ್ವಿಫ್ಟ್ ಡಿಜೈರ್ ಕಾರನ್ನು ತಡೆದು ಪರಿಶೀಲಿಸಲಾಯಿತು. ಈ ವೇಳೆ ಕಾರಿನಲ್ಲಿ 28.750 ಲೀಟರ್ ಗೋವಾ ಮದ್ಯ ಹಾಗೂ 2.320 ಲೀಟರ್ ಬಿಯರ್ ಪತ್ತೆಯಾಗಿದ್ದು, ಮದ್ಯವನ್ನು ವಶಪಡಿಸಿಕೊಂಡು ಕಾರಿನಲ್ಲಿದ್ದ ಗೋವಾದ ಕಾಣಕೋಣ ತಾಲೂಕಿನ ಪೋಲೆಮ್, ಲೋಲೆಮ್ ನಿವಾಸಿ ದೀಪಕ ಪಾಗಿ ಎಂಬಾತನನ್ನು ಬಂಧಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ, ಅಕ್ಟೋಬರ್ 6ರಂದು ಕಾರವಾರ ತಾಲೂಕಿನ ಮುಡಗೇರಿ ಅರಣ್ಯ ಪ್ರದೇಶದಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅಂದಾಜು ₹98,400 ಮೌಲ್ಯದ 179.640 ಲೀಟರ್ ಗೋವಾ ಮದ್ಯ ಹಾಗೂ ₹80 ಸಾವಿರ ಮೌಲ್ಯದ ಎರಡು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರು ಹಾಗೂ ಉತ್ತರ ಕನ್ನಡ ಜಿಲ್ಲಾ ಅಬಕಾರಿ ಉಪ ಆಯುಕ್ತರ ನಿರ್ದೇಶನದಂತೆ, ಕಾರವಾರ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ಈ ಕಾರ್ಯಾಚರಣೆಗಳು ನಡೆದಿವೆ.
