ಜೋಯಿಡಾ: ಧಾರವಾಡದ ಖ್ಯಾತ ಮನೋರೋಗ ತಜ್ಞರಾದ ಡಾ. ಆನಂದ ಕೆ. ಪಾಂಡುರಂಗಿ ಅವರು ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ, ಅವರ ಆತ್ಮಕ್ಕೆ ಶಾಂತಿ ಕೋರಿ ಜೋಯಿಡಾದ ಅಸ್ನೋಟಿಕರ ಸಭಾಭವನದಲ್ಲಿ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು. ಸಂಜೀವಿನಿ ಸೇವಾ ಟ್ರಸ್ಟ್ ಹಾಗೂ ಕಾಳಿ ಬ್ರಿಗೇಡ್ ಜಂಟಿಯಾಗಿ ಈ ಸಭೆಯನ್ನು ಆಯೋಜಿಸಿದ್ದವು.
ಕಳೆದ ಮೂರು ದಶಕಗಳಿಂದ ಜೋಯಿಡಾ ತಾಲ್ಲೂಕಿನ ಮನೋರೋಗಿಗಳಿಗೆ ಡಾ. ಪಾಂಡುರಂಗಿ ಅವರು ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಸಭೆಯಲ್ಲಿ ಸ್ಮರಿಸಲಾಯಿತು. ಜೋಯಿಡಾದ ಪಾಲಿಗೆ ಅವರು ದೇವರಂತಿದ್ದರು. ಆರ್ಥಿಕವಾಗಿ ಹಿಂದುಳಿದ ಹಾಗೂ ಹಣಕಾಸಿನ ತೊಂದರೆಯಲ್ಲಿದ್ದ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವುದನ್ನು ತಪ್ಪಿಸಿದ್ದಾರೆ. ಅವರ ಸೇವೆಯಿಂದ ಸಾವಿರಾರು ಕುಟುಂಬಗಳಿಗೆ ನೆಮ್ಮದಿ ದೊರೆತಿದೆ ಎಂದು ಸಭೆಯಲ್ಲಿ ಪಾಲ್ಗೊಂಡವರು ಭಾವುಕರಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಸಂಜೀವಿನಿ ಸೇವಾ ಟ್ರಸ್ಟ್ನ ಕಾರ್ಯದರ್ಶಿ ಡಾ. ಜಯಾನಂದ ಡೇರೆಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ಜೋಯಿಡಾ ತಾಲ್ಲೂಕಿನ ಬಡ ಜನರಿಗೆ ಡಾ. ಆನಂದ ಪಾಂಡುರಂಗಿ ಅವರು ನೀಡಿದ ಉಚಿತ ಚಿಕಿತ್ಸೆ, ಅಮೂಲ್ಯ ಸಲಹೆ ಹಾಗೂ ಮಾರ್ಗದರ್ಶನವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಸೇವಾ ಮನೋಭಾವ ಮತ್ತು ಮಾರ್ಗದರ್ಶನವು ನಮ್ಮ ಕ್ಷೇತ್ರದಲ್ಲಿ ಸಮಾಜಸೇವೆಯನ್ನು ಮುಂದುವರಿಸಲು ನಮಗೆ ಸದಾ ಪ್ರೇರಣೆಯಾಗಿದೆ. ಇಂತಹ ಶ್ರೇಷ್ಠ ವೈದ್ಯರು ಹಾಗೂ ಮಾರ್ಗದರ್ಶಕರನ್ನು ಕಳೆದುಕೊಂಡಿರುವುದು ನಮ್ಮೆಲ್ಲರಿಗೂ ತುಂಬಲಾರದ ನಷ್ಟವಾಗಿದೆ” ಎಂದು ದುಃಖ ವ್ಯಕ್ತಪಡಿಸಿದರು.
ಕರ್ನಾಟಕ ಕಿಸಾನ್ ಕಾಂಗ್ರೆಸ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ರೇಡಕರ್ ಅವರು ಮಾತನಾಡಿ, ಡಾ. ಪಾಂಡುರಂಗಿ ಅವರೊಂದಿಗಿನ ತಮ್ಮ ಮೂರು ದಶಕಗಳ ಒಡನಾಟವನ್ನು ಸ್ಮರಿಸಿ, ಅವರ ಸೇವಾ ಬದ್ಧತೆ ಮತ್ತು ಮಾನವೀಯ ಗುಣಗಳನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ಉದ್ಯಮಿ ರಫೀಕ್ ಖಾಜಿ, ಪ್ರಭಾಕರ ನಾಯ್ಕ್, ಕಿರಣ ನಾಯ್ಕ್, ನಾರಾಯಣ ಹೆಬ್ಬಾರ್, ಕಾಳಿ ಬ್ರಿಗೇಡ್ ಅಧ್ಯಕ್ಷ ಸತೀಶ ನಾಯ್ಕ್, ಕಾರ್ಯದರ್ಶಿ ಸಮೀರ್ ಮುಜಾವರ್, ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸುಧಾಕರ ದೇಸಾಯಿ, ಅಜಿತ್ ಮಿರಾಶಿ, ಜಿಎಸ್ಎಸ್ ಸೊಸೈಟಿಯ ಕಾರ್ಯದರ್ಶಿ ಸುಲಕ್ಷಾ ದೇಸಾಯಿ, ಡಾ. ಗಣೇಶ್, ಸಂಜೀವಿನಿ ಸೇವಾ ಟ್ರಸ್ಟ್ನ ಸಿಬ್ಬಂದಿಗಳಾದ ಜಯಂತ್ ಗಾವಡಾ, ನಾಗವೇಣಿ, ಲಲಿತಾ, ಹಿರಿಯರಾದ ಗಜಾನನ ದೇಸಾಯಿ, ರವಿ ಡೇರೆಕರ್, ಡಾಮನಿಕ್ ಫರ್ನಾಂಡಿಸ್ ಹಾಗೂ ಉದಯ ದೇಸಾಯಿ ಉಪಸ್ಥಿತರಿದ್ದರು.
