ಮುಂಡಗೋಡ: ಪಟ್ಟಣದ ಆಭರಣ ಮಳಿಗೆಯಲ್ಲಿ ಬೆಳ್ಳಿ ಕಾಲ್ಚೈನ್ಗಳನ್ನು ಕಳವು ಮಾಡಿ ಪರಾರಿಯಾಗಿದ್ದ ಬೆಳಗಾವಿ ಮೂಲದ ಇಬ್ಬರು ಮಹಿಳೆಯರನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ. ಆರೋಪಿತರಿಂದ 1.30 ಲಕ್ಷ ರೂ. ಮೌಲ್ಯದ 700 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಶ್ರೀ ರಾಜಲಕ್ಷ್ಮೀ ಜುವೆಲರ್ಸ್ನಲ್ಲಿ ಅಕ್ಟೋಬರ್ 17ರಂದು ಮಧ್ಯಾಹ್ನ ಈ ಕಳ್ಳತನ ನಡೆದಿತ್ತು. ಇಬ್ಬರು ಮಹಿಳೆಯರು ಅಂಗಡಿಗೆ ಬಂದಿದ್ದ ವೇಳೆ ಸುಮಾರು 3.45ರಿಂದ 4.15ರ ನಡುವಿನ ಅವಧಿಯಲ್ಲಿ ನಾಲ್ಕು ಜೊತೆ ಬೆಳ್ಳಿ ಕಾಲ್ಚೈನ್ಗಳನ್ನು ಕಳವು ಮಾಡಿಕೊಂಡು ಹೋಗಿದ್ದರು. ಘಟನೆಗೆ ಸಂಬಂಧಿಸಿದಂತೆ ಅಂಗಡಿ ಮಾಲೀಕರು ನೀಡಿದ ದೂರಿನ ಆಧಾರದಲ್ಲಿ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕಳ್ಳತನ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು. ಪೊಲೀಸ್ ನಿರೀಕ್ಷಕ ರಮೇಶ ಹಾನಾಪೂರ ನೇತೃತ್ವದ ತಂಡವು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಬೆಳಗಾವಿ ಜಿಲ್ಲೆಯ ಬಾಳೇಕುಂದ್ರಿ ನಿವಾಸಿಗಳಾದ ಶಾಂತಾ ಕೋಂ ಮದನ ಪೂಜಾರಿ ಹಾಗೂ ಶಾಂತಾ ಕೋಂ ಮೂರ್ತಿ ಅಂಗಡಿ ಎಂಬುವರನ್ನು ಬಂಧಿಸಿದೆ.
ಆರೋಪಿತರಿಂದ ಕಳವು ಮಾಡಿದ್ದ ಸಂಪೂರ್ಣ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಹಾಗೂ ಶಿರಸಿ ಉಪವಿಭಾಗದ ಡಿವೈಎಸ್ಪಿ ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್ಐ ಮಂಜುನಾಥ ಗೌಡರ, ಪ್ರೊ. ಪಿಎಸ್ಐ ನಿಂಗರಾಜ ಕರಡಿಗುದ್ದಿ, ಎಎಸ್ಐ ಸೋಮಶೇಖರ ಮೇತ್ರಿ ಸೇರಿದಂತೆ ಮುಂಡಗೋಡ ಪೊಲೀಸ್ ಠಾಣೆಯ ಸಿಬ್ಬಂದಿ ಪಾಲ್ಗೊಂಡಿದ್ದರು.
