ಕಾರವಾರ: ಬರೋಬ್ಬರಿ 1.15 ಕೋಟಿ ರೂ. ಹವಾಲ ಹಣ ದರೋಡೆ ಪ್ರಕರಣದ ತನಿಖೆ ಕಾರವಾರದ ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸಿದೆ. ಮಂಗಳೂರಿನಲ್ಲಿ ನಡೆದ ಹಣದ ದರೋಡೆ ಹಾಗೂ ವ್ಯಕ್ತಿಯ ಅಪಹರಣ ಪ್ರಕರಣದಲ್ಲಿ ಕಾರವಾರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆಯೊಬ್ಬರು ಆರೋಪಿಯಾಗಿ ಬಂಧನಕ್ಕೊಳಗಾಗಿದ್ದಾರೆ.
ಬಂಧಿತನನ್ನು ಶ್ರೀಶೈಲ್ ಎಂದು ಗುರುತಿಸಲಾಗಿದ್ದು, ಪ್ರಕರಣದಲ್ಲಿ ಅವರ ಹೆಸರು ಕೇಳಿಬರುತ್ತಿದ್ದಂತೆಯೇ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಅವರು ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ದಾವಣಗೆರೆಯಿಂದ ಮಂಗಳೂರಿಗೆ ಸಾಗಿಸಲಾಗುತ್ತಿದ್ದ ಹವಾಲ ಹಣದ ಮೇಲೆ ಕಣ್ಣಿಟ್ಟಿದ್ದ ಆರೋಪಿಗಳು, ಹಣದ ವ್ಯವಹಾರದ ಮಾಹಿತಿ ತಿಳಿದುಕೊಂಡು ಸತ್ಯನಾರಾಯಣ ಎಂಬುವವರನ್ನು ಅಪಹರಿಸಿ ಅವರ ಬಳಿಯಿದ್ದ ಸುಮಾರು 1.15 ಕೋಟಿ ರೂ. ಹಣವನ್ನು ದೋಚಿದ್ದರು ಎನ್ನಲಾಗಿದೆ. ಈ ಸಂಬಂಧ ಸತ್ಯನಾರಾಯಣ ನೀಡಿದ ದೂರಿನ ಮೇರೆಗೆ ಮಂಗಳೂರು ಪೊಲೀಸರು ತನಿಖೆ ಆರಂಭಿಸಿದ್ದರು.
ತನಿಖೆ ಮುಂದುವರಿದಂತೆ ಈ ದರೋಡೆಯ ಹಿಂದೆ ರೂಪಿಸಲಾಗಿದ್ದ ಸಂಚಿನಲ್ಲಿ ಕಾರವಾರದ ಪೊಲೀಸ್ ಪೇದೆ ಶ್ರೀಶೈಲ್ ಕೈವಾಡವಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಹಣ ಸಾಗಣೆಯ ಮಾಹಿತಿಯನ್ನು ಅರಿತಿದ್ದ ಶ್ರೀಶೈಲ್, ಕಾರವಾರ ಭಾಗದ ಯುವಕರನ್ನು ಬಳಸಿಕೊಂಡು ಸತ್ಯನಾರಾಯಣ ಅವರನ್ನು ಅಪಹರಿಸುವ ಯೋಜನೆ ರೂಪಿಸಿದ್ದ ಎಂಬ ಆರೋಪ ಕೇಳಿಬಂದಿದೆ. ಈ ಕೃತ್ಯಕ್ಕೆ ಕಾರವಾರ ತಾಲೂಕಿನ ಕಿನ್ನರ ಗ್ರಾಮದ ಗಣೇಶ ಕೋಳಂಕರ್ ಎಂಬ ಯುವಕನನ್ನು ಬಳಸಿಕೊಂಡಿದ್ದ ಎನ್ನಲಾಗಿದೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿರುವ ಮಂಗಳೂರು ಪೊಲೀಸರು, ಇದೀಗ ಪೊಲೀಸ್ ಪೇದೆ ಶ್ರೀಶೈಲ್ನನ್ನೂ ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿರುವ ಗಣೇಶ ಕೋಳಂಕರ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಹವಾಲ ಹಣದ ದರೋಡೆಗೆ ಪೊಲೀಸ್ ಇಲಾಖೆಯ ಸಿಬ್ಬಂದಿಯೇ ಸಂಚಿನಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿರುವುದು ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ತಂದಿದೆ. ಹಣದ ಸಾಗಣೆ ಕುರಿತು ಮಾಹಿತಿ ಸೋರಿಕೆಯಾಗಿದ್ದು ಹೇಗೆ? ಅಪಹರಣ ಮತ್ತು ದರೋಡೆಯ ಸಂಚಿನಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ನಿಟ್ಟಿನಲ್ಲಿ ಮಂಗಳೂರು ಪೊಲೀಸರ ತನಿಖೆ ಮುಂದುವರಿದಿದೆ.
