
ಕಾರವಾರ:
ನಗರದ ಕೋಡಿಭಾಗದಲ್ಲಿನ ಸಾಯಿ ಮಂದಿರದಲ್ಲಿ ಕದ್ದ ದೇವರ ಕೊಡೆಯನ್ನ ಗೋವಾದ ವಾಸ್ಕೋ ರೈಲ್ವೆ ನಿಲ್ದಾಣದಲ್ಲಿ ಕಳ್ಳರು ಬಿಟ್ಟು ಪರಾರಿಯಾಗಿದ್ದು ರೈಲ್ವೆ ಪೊಲೀಸರು ಇದನ್ನ ಪತ್ತೆ ಮಾಡಿದ್ದಾರೆ.
ಕಳ್ಳರ ಗುರುತು ಸಹ ಪೊಲೀಸರು ಪತ್ತೆ ಹಚ್ಚಿದ್ದು ಶೀಘ್ರದಲ್ಲಿ ಬಂದಿಸುವ ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಬೆಳಿಗ್ಗಿನ ಜಾವ ಕಾರವಾರ ನಗರದ ಸಾಯಿಕಟ್ಟಾ ಸಾಯಿಮಂದಿರದಲ್ಲಿ ಕಳ್ಳತನ ನಡೆದಿದ್ದು, ಈ ವೇಳೆ ದೇವರ ಬೆಳ್ಳಿ ಕೊಡೆ, ಪಾದುಕೆ, ಪ್ರಭಾವಳಿ ಸೇರಿದಂತೆ ಸುಮಾರು 10 ಕೆಜಿಗೂ ಅಧಿಕ ಮೌಲ್ಯದ ಬೆಳ್ಳಿಯ ವಸ್ತುಗಳನ್ನು ಕಳ್ಳತನ ಮಾಡಲಾಗಿತ್ತು. ಮೂರು ಆರೋಪಿಗಳು ಬೆಳಗ್ಗಿನ ಜಾವ ಬೆಳ್ಳಿ ವಸ್ತುಗಳನ್ನ ಕದ್ದು ಪರಾರಿಯಾಗಿದ್ದು ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಕಳ್ಳತನ ನಡೆದ ದಿನವೇ ಸಂಜೆ ವೇಳೆ ಗೋವಾದ ವಾಸ್ಕೋ ರೈಲ್ವೆ ನಿಲ್ದಾಣದಲ್ಲಿ ₹5.3 ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಳ್ಳಿಯ ಕೊಡೆ ಕಂಡುಬಂದಿತ್ತು. ರೈಲ್ವೆ ಪೊಲೀಸರು ಎಂದಿನಂತೆ ಪ್ಯಾಟ್ರೋಲಿಂಗ್ ಮಾಡುತ್ತಿದ್ದ ವೇಳೆ ಒಂದು ಬೆಡ್ಶೀಟ್ನಲ್ಲಿ ಸುತ್ತಿದ್ದ ಅನಾಥವಾಗಿ ಬಿದ್ದಿದ್ದ ಬ್ಯಾಗ್ ಅನ್ನು ಗಮನಿಸಿದ್ದರು. ಅದರೊಳಗಿನ ವಸ್ತುಗಳನ್ನು ಪರಿಶೀಲಿಸಿದಾಗ, ಬಿಳಿ ಲೋಹದ ವಸ್ತು ಇದ್ದುದು ಕಂಡುಬಂತು. ಇದು ಬೆಳ್ಳಿಯದೇನೋ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ಚಿನ್ನದ ವ್ಯಾಪಾರಿ ಸಹಾಯ ಪಡೆದರು.
ಸ್ಥಳಕ್ಕೆ ಧಾವಿಸಿದ ಚಿನ್ನದ ವ್ಯಾಪಾರಿ ಪರೀಕ್ಷಿಸಿದ ನಂತರ, ಈ ವಸ್ತು 87.50% ಶುದ್ಧ ಬೆಳ್ಳಿಯಿಂದ ಮಾಡಲ್ಪಟ್ಟ ಸಾಂಪ್ರದಾಯಿಕ ದೇವರ ಕೊಡೆ ಎಂದು ದೃಢಪಡಿಸಿದರು. ಇದರ ತೂಕ ಸುಮಾರು 6.4 ಕೆಜಿಯಿದ್ದು, ಸುಮಾರು ₹5,37,600 ರೂ. ಮೌಲ್ಯದ್ದಾಗಿದೆ ಎಂದು ಅಂದಾಜು ಮಾಡಲಾಗಿದೆ.