
ದಾಂಡೇಲಿ : ಹೆರಿಗೆಯಾಗಿ ವಿಪರೀತ ರಕ್ತಸ್ರಾವವಾಗಿ ರಕ್ತದ ಕೊರತೆಯಿಂದ ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ ಮಹಿಳೆಗೆ ಸಾರ್ವಜನಿಕ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ಚಿದಾನಂದ ಅವರು ತಕ್ಷಣವೇ ರಕ್ತವನ್ನು ನೀಡಿ ಜೀವ ಉಳಿಸಲು ನೆರವಾಗುವ ಮೂಲಕ ನಿಜವಾದ ಮಾನವೀಯತೆಯನ್ನು ಮೆರೆದಿದ್ದಾರೆ.
ಹೆರಿಗೆಗಾಗಿ ದಾಂಡೇಲಿ ತಾಲೂಕಿನ ಅಂಬಿಕಾ ನಗರದ ಮಹಿಳೆಯೋರ್ವರು ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಬೆಳಗ್ಗೆ ಸಿಸೇರಿಯನ್ ಹೆರಿಗೆಯಾದ ನಂತರ ವಿಪರೀತ ರಕ್ತಸ್ರಾವಾಗಿತ್ತು. ಪರಿಣಾಮವಾಗಿ ತುರ್ತು ಓ ಫಾಸಿಟಿವ್ ರಕ್ತ ಬೇಕಾಗಿತ್ತು. ತಕ್ಷಣವೇ ರಕ್ತ ನೀಡದೇ ಇದ್ದಲ್ಲಿ ಆ ಮಹಿಳೆಯ ಜೀವಕ್ಕೆ ಅಪಾಯವಾಗುತ್ತಿತ್ತು. ಇದನ್ನು ಗಮನಿಸಿದ ಸಾರ್ವಜನಿಕ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ಚಿದಾನಂದ ಅವರು ತಕ್ಷಣವೇ ಓಡೋಡಿ ಬಂದು ತನ್ನದು ಓ ಪಾಸಿಟಿವ್ ರಕ್ತ ಇದೆ ಎಂದು ಹೇಳಿ, ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯಲ್ಲಿರುವ ರಕ್ತ ನಿಧಿ ಕೇಂದ್ರಕ್ಕೆ ತೆರಳಿ ರಕ್ತವನ್ನು ನೀಡಿ, ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ ಮಹಿಳೆಯ ಜೀವವನ್ನು ಉಳಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.