
ಕಾರವಾರ :
ನಗರಸಭೆಯ ಮಾಜಿ ಸದಸ್ಯ ಸತೀಶ ಕೇಳಂಬಕರ ಅವರ ಹತ್ಯೆ ಪ್ರಕರಣದ ಮಹಜರು ವೇಳೆ ಆರೋಪಿ ನಿತೇಶ ತಾಂಡಲನ ಎಡಗಾಲಿಗೆ ಪೊಲೀಸ್ ಅಧಿಕಾರಿಗಳು ಗುಂಡು ಹಾರಿಸಿದ್ದಾರೆ.
ಹತ್ಯೆಯ ಪ್ರಕರಣದ ಹಿನ್ನಲೆ ಆರೋಪಿಗಳಾದ ನಿತೇಶ ತಾಂಡೇಲ, ಸುರೇಂದ್ರ ನಾಯ್ಕ ಹಾಗೂ ನಿತ್ಯಾನಂದ ಎನ್ನುವವರನ್ನು ವಶಕ್ಕೆ ಪಡೆದ ವಿಚಾರಣೆ ನಡೆಸಲಾಗುತ್ತಿತ್ತು. ಹತ್ಯೆ ಮಾಡಿದ ಬಳಿಕ ಆರೋಪಿಗಳು ಗೋವಾಕ್ಕೆ ತೆರಳಿದ್ದು ತಿಳಿದ ಪೊಲೀಸರು ಮಂಗಳವಾರ ಸಂಜೆಯ ವೇಳೆಗೆ ಸ್ಥಳ ಮಹಜರು ಮಾಡಲು ಆರೋಪಿಗಳೊಂದಿಗೆ ಗೋವಾಕ್ಕೆ ತೆರಳಿದ್ದಾರೆ. ವಾಪಸ್ ಕಾರವಾರಕ್ಕೆ ತೆರಳುವ ವೇಳೆ ಆರೋಪಿ ನಿತೇಶ ತಾಂಡೇಲ ಮೂತ್ರ ವಿಸರ್ಜನೆ ಮಾಡುವುದಾಗಿ ಕೇಳಿಕೊಂಡಿದ್ದು ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ. ಈ ವೇಳೆ ಆರೋಪಿ ನಿತೇಶ ತಾಂಡೇಲ ರಸ್ತೆಯಲ್ಲಿದ್ದ ಬೀಯರ್ ಬಾಟಲಿಯಿಂದ ಹೆಡ್ ಕಾನ್ಸಟೇಬಲ್ ಹಸನ್ ಕುಟ್ಟಿ ಹಾಗೂ ಸಿಬ್ಬಂದಿ ಗಿರೀಶಯ್ಯ ಅವರ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ತಿಳಿಸಿದ್ದಾರೆ. ಬಳಿಕ ಪಿಎಸ್ಸೈ ಕುಮಾರ ಕಾಂಬ್ಳೆ ಅವರು ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗಲು ತಿಳಿಸಿದರೂ ಹಲ್ಲೆ ಮುಂದುವರೆಸಿದ್ದು ಆತನ ಎಡಗಾಲಿಗೆ ಗುಂಡು ಹಾರಿಸಲಾಗಿದೆ ಎಂದು ತಿಳಿಸಿದ್ದಾರೆ.
ಸದ್ಯ ಆರೋಪಿ ನಿತೇಶ ತಾಂಡೇಲ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೋಡಲಾಗುತ್ತಿದ್ದು ನಿತೇಶ ತಾಂಡೇಲಗೆ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.