
ಕಾರವಾರ:
ಡಾ. ರಾಜಕುಮಾರ್ ಅವರಿಗಿದ್ದ ಕನ್ನಡ ನೆಲ ಜಲದ ಬಗ್ಗೆ ಅವರಿಗಿದ್ದ ಅಭಿಮಾನವನ್ನು ಚಲನ ಚಿತ್ರಗಳ ಮೂಲಕ ಮತ್ತು ವೈಯಕ್ತಿಕವಾಗಿ ತಮ್ಮ ಜೀವನದುದ್ದಕ್ಕೂ ತಿಳಿಸಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ಡಾ. ರಾಜ್ ಕುಮಾರ್ ರವರ 97 ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಡಾ. ರಾಜಕುಮಾರ್ ಅವರು ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿ ಯಶಸ್ವಿಯಾಗಿ, ಇಡೀ ಸಮಾಜಕ್ಕೆ ಮಾದರಿಯಾಗಿ, ಚಿತ್ರರಂಗ ಮತ್ತು ನಾಟಕ ರಂಗಕ್ಕೆ ತನ್ನದೇ ಆದ ಕೊಡುಗೆ ನೀಡಿ ಕಲಾ ಕ್ಷೇತ್ರವನ್ನು ಹೆಮ್ಮರವಾಗಿ ಬೆಳಸಿದ್ದಾರೆ ಎಂದರು.
ಕಾರವಾರದ ಡಾ. ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಟಿ.ಬಿ ಹರಿಕಾಂತ ಮಾತನಾಡಿ, ಡಾ. ರಾಜ್ಕುಮಾರ್ ಒಂದು ಶಕ್ತಿಯಿದ್ದಂತೆ, ಅವರು ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳ ವ್ಯಕ್ತಿಯಾಗಿದ್ದು, ಅವರ ಬಹುತೇಕ ಚಲನಚಿತ್ರಗಳಲ್ಲಿ ಸಮಾಜದಲ್ಲಿನ ಆಗು ಹೋಗುಗಳ ಕುರಿತು ಬೆಳಕು ಚಲ್ಲಿದ್ದಾರೆ ಎಂದರು.
ಡಾ. ರಾಜ್ ಕುಮಾರ್ ಕುರಿತು ಹಿರಿಯ ಪತ್ರಕರ್ತ ನಾಗರಾಜ ಹರಪನಹಳ್ಳಿ ಉಪನ್ಯಾಸ ನೀಡಿದರು.