
ಕಾರವಾರ:
ಮಂಗಳೂರಿನಲ್ಲಿ ನಡೆದ ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಬುಧವಾರ ಕಾರವಾರ ಬಂದ್ ಗೆ ಕರೆ ನೀಡಲಾಗಿದೆ ಎಂದು ಹಿಂದು ಸಂಘಟನೆಗಳ ಸಮಾನ ಮನಸ್ಕ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಂಗಳೂರಿನಲ್ಲಿ ನಡೆದ ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಕೇವಲ ದಕ್ಷಿಣ ಕನ್ನಡ ಮಾತ್ರವಲ್ಲದೇ ಇಡೀ ಕರಾವಳಿಯಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ. ಈ ಘಟನೆ ಖಂಡಿಸಿ ಬುಧವಾರ ಬೆಳಿಗ್ಗೆ 9-30ಕ್ಕೆ ಕಾರವಾರದ ಕೋಡಿಬೀರ ದೇವಸ್ಥಾನದಿಂದ ಪ್ರತಿಭಟನಾ ರ್ಯಾಲಿ ನಡೆಯಲಿದೆ. ಅಲ್ಲಿಂದ ಸುಭಾಷ್ ವೃತ್ತದ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ ಮಾಡುವ ಮೂಲಕ ಪ್ರತಿಭಟನೆ ಮುಕ್ತಾಯಗೊಳಿಸಲಿದ್ದೇವೆ. ನಗರದಲ್ಲಿ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಲು ವರ್ತಕರು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.