
ಶಿರಸಿ: ಹವ್ಯಕ ಶಿಕ್ಷಕರಿಗಾಗಿ ನಡೆದ `ಶಿಕ್ಷಕರ ಸಮ್ಮಿಲನ\’ ಕಾರ್ಯಕ್ರಮ ಯಶಸ್ವಿಯಾಗಿದ್ದು ಇಡೀ ದಿನ ಶಿಕ್ಷಕರು ವಿವಿಧ ಸ್ಪರ್ಧೆ, ಚರ್ಚೆಯಲ್ಲಿ ಭಾಗವಹಿಸಿ ಹೊಸ ಚೈತನ್ಯ ತುಂಬಿಕೊoಡು ಶಾಲೆಗಳಿಗೆ ಮರಳಿದರು.
ಸಮ್ಮೇಳನದ ಅಧ್ಯಕ್ಷತೆವಹಿಸಿ ಆಶೀರ್ವಚನ ನೀಡಿದ ಎಂದು ಸ್ವರ್ಣವಲ್ಲೀ ಗಂಗಾಧರೇoದ್ರ ಸರಸ್ವತೀ ಮಹಾಸ್ವಾಮೀಜಿ `ಹವ್ಯಕ ಎಂಬ ಶಬ್ದವೇ ಸಂಸ್ಕೃತಿಯನ್ನು ತಿಳಿಸುತ್ತದೆ. ಹವ್ಯಕ ಸಮಾಜ ಸುಸಂಸ್ಕೃತ ಸಮಾಜ. ಹವ್ಯಕ ಸಮಾಜ ತನ್ನ ಸಂಸ್ಕಾರ, ಸಂಸ್ಕೃತಿ, ಶ್ರೇಷ್ಠತೆಯನ್ನು ಹಾಗೇ ಉಳಿಸಿಕೊಂಡು ಹೋಗುವ ಜವಾಬ್ದಾರಿ ತೋರಬೇಕು. ಷಟ್ಕರ್ಮಗಳನ್ನು ನಡೆಸಿಕೊಂಡು ಬಂದಿದೆ. ಯಜನ, ಯಾಜನ, ದಾನ, ಪ್ರತಿಗ್ರಹ, ಅಧ್ಯಯನ ಹಾಗೂ ಅಧ್ಯಾಪನ ಈ ಕರ್ಮಗಳನ್ನು ಮುನಡೆಸಿಕೊಂಡ ಬಂದ ಸುಸಂಸ್ಕೃತ ಸಮಾಜ. ಮಕ್ಕಳಿಗೆ ಹವ್ಯಕ ಸಮಾಜದ ಶ್ರೇಷ್ಠತೆಯನ್ನು ತಿಳಿಸುವ ಕೆಲಸ ಆಗಬೇಕು\’ ಎಂದರು.
`ಆಧುನಿಕ ಶಿಕ್ಷಣದ ಗಾಳಿ ಸಿಲುಕಿ ಹವ್ಯಕ ಸಮಾಜದ ಮಕ್ಕಳು ದಾರಿತಪ್ಪದಂತೆ, ನಮ್ಮತನ ಬಿಡದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಹವ್ಯಕ ಸಮಾಜ ಹಾಗೂ ಈ ಸಮಾಜದ ಶಿಕ್ಷಕರ ಮೇಲಿದೆ. ನಮ್ಮತನ ಬಿಡುವುದು ದೊಡ್ಡತನವಲ್ಲ ಅದು ದಡ್ಡತನವಾಗುತ್ತದೆ\’ ಎಂದರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, `ಮಕ್ಕಳಲ್ಲಿ ರಾಷ್ಟ್ರೀಯತೆ ಜಾಗೃತಗೊಳಿಸಬೇಕು. ಶಿಸ್ತಿನ ಜೀವನ ನಡೆಸಬೇಕು. ದೇಶ ಮೊದಲು ಎಂಬ ಭಾವನೆ ನಿರ್ಮಾಣ ಮಾಡಬೇಕು\’ ಎಂದು ಕರೆ ನೀಡಿದರು. `ವಿದ್ಯಾರ್ಥಿಗಳಂತೆ ಶಿಕ್ಷಕರನ್ನೂ ಕ್ರಿಯಾಶೀಲಗೊಳಿಸಲು ಇಂಥ ಸಮಾವೇಶಗಳು ಕಾರಣವಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಸಾರ್ಥಕತೆ, ಬದ್ಧತೆಯಿಂದ ಕೆಲಸ ಮಾಡಬೇಕು. ಸಂಘಟಿತ ಸಂದರ್ಭದಲ್ಲಿ ಸಂಕಷ್ಟ ಎದುರಿಸಿ ಮುನ್ನಡೆಯಬೇಕು. ಸಂಕಷ್ಟಗಳು ಶಿಕ್ಷಣದಲ್ಲಿ ಕಾಣಬಾರದು. ಭವ್ಯ ಭಾರತದ ನಿರ್ಮಾಣ ಆಗಬೇಕು. ನಮ್ಮ ಗುರುಗಳು ಅವರು ಎಂಬ ಅಭಿಮಾನದಲ್ಲಿ ಶಿಷ್ಯರು ಹೇಳುವಂತೆ ಆಗಬೇಕು\’ ಎಂದರು.
ಅಖಿಲ ಹವ್ಯಕ ಮಹಾ ಸಭೆ ಅಧ್ಯಕ್ಷ ಗಿರಿಧರ ಕಜೆ ಮಾತನಾಡಿ `ಹವ್ಯಕ ಸಮಾಜ ಹುಟ್ಟಿದ್ದೆ ಲೋಕಕಲ್ಯಾಣಾರ್ಥವಾಗಿ. ನಮ್ಮ ಸಂಸ್ಕೃತಿ, ಪರಂಪರೆಗೆ ಗಟ್ಟಿತನವಿದೆ. ಯಜ್ಞ-ಯಾಗವನ್ನು ಮುಂದುವರೆಸಿಕೊAಡು ಬಂದಿದ್ದೇವೆ. ಜ್ಞಾನದಾಸೋಹ ಮಾಡಿಸುತ್ತಿದ್ದೇವೆ. ವಿಶೇಷ ಪಾಕ ಸಂಸ್ಕಾರ ಹೊಂದಿದೆ. ಈ ಸಮಾಜಕ್ಕೆ ಪ್ರತ್ಯೇಕ ಭಾಷೆಯೇ ಇದೆ ಎಂದರು. ಎಲ್ಲ ಸಮಾಜದ ಒಳಿತಿಗಾಗಿ ಶ್ರಮಿಸೋಣ\’ ಎಂದರು.
ಇದೇ ವೇಳೆ ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ತಮ್ಮಣ್ಣ ಬೀಗಾರ, ಜಿ.ಜಿ.ಹೆಗಡೆ ಬಾಳಗೋಡು, ಆರ್.ಎಸ್.ಹೆಗಡೆ ಭೈರುಂಬೆ, ಶ್ರೀಪಾದ ಭಟ್ಟ, ಡಿ.ಪಿ.ಹೆಗಡೆ, ಕೆ.ಎಲ್.ಭಟ್ಟ, ಸ್ತ್ರೀಯ ನಾರಾಯಣ ಪಿ.ಭಾಗ್ವತ್, ರಾಜ್ಯ ಪ್ರಶಸ್ತಿ ಪಡೆದ ಎನ್. ಎಸ್.ಭಟ್ಟ ಶಿಗೆಕೇರಿ, ಕೆ.ಎ.ಹೆಗಡೆ, ಸತೀಶ ಯಲ್ಲಾಪುರ, ಶಿಕ್ಷಕರು ವಿ.ಟಿ.ಹೆಗಡೆ, ಪ್ರಭಾಕರ ಭಟ್ಟ, ನಾಗಪತಿ ಹೆಗಡೆ, ಜಿ. ಎಸ್.ಭಟ್ಟ, ಎಸ್.ಎನ್.ಭಾಗ್ವತ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, ಉದ್ಯಮಿ ಅನಂತಮೂರ್ತಿ ಹೆಗಡೆ, ಡಿ.ಪಿ.ಹೆಗಡೆ, ಪ್ರಶಾಂತ ಮಲವಳ್ಳಿ, ಮಹಾಬಲೇಶ್ವರ ಹೆಗಡೆ ಇದ್ದರು. ಭಾಸ್ಕರ ಗಾಂವಕರ್ ನಿರ್ವಹಿಸಿದರು.