
ಕಾರವಾರ: `ಜಿಲ್ಲೆಯಲ್ಲಿನ ಮಾಜಿ ಯೋಧರು, ಅಶಕ್ತರು ಮತ್ತು ವಸತಿಹೀನರಿಗೆ ಜೀವನ ನಿರ್ವಹಣೆಗೆ ಭೂಮಿ ಒದಗಿಸುವ ಕುರಿತಂತೆ ಜಿಲ್ಲೆಯ ಎಲ್ಲಾ ತಾಲುಕಿನ ತಹಶೀಲ್ದಾರರು ತಮ್ಮ ವ್ಯಾಪ್ತಿಯಲ್ಲಿರುವ ಖಾಲಿ ಭೂಮಿ ಕುರಿತು ಮಾಹಿತಿ ಸಲ್ಲಿಸಬೇಕು\’ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸೂಚಿಸಿದರು.
ಶುಕ್ರವಾರ ತಹಶೀಲ್ದಾರರ ಸಭೆ ನಡೆಸಿದ ಅವರು `ಪ್ರತಿ ವರ್ಷ ಜುಲೈ 1ಕ್ಕೆ ಜಿಲ್ಲೆಯಲ್ಲಿ ಲಭ್ಯವಿರುವ ಖಾಲಿ ಜಮೀನಿನ ಕುರಿತಂತೆ ಘೋಷಣೆ ಮಾಡಬೇಕು. ಇದರಿಂದ ಆ ಭೂಮಿಯನ್ನು ದೇಶ ಸೇವೆಗಾಗಿ ಜೀವನ ಮುಡಿಪಾಗಿಟ್ಟು ನಿವೃತ್ತರಾದ ಮತ್ತು ವಿವಿಧ ಕಾರ್ಯಚರಣೆಗಳಲ್ಲಿ ಭಾಗವಹಿಸಿ ವಿಕಲಚೇತನರಾದ ಮಾಜಿ ಸೈನಿಕರಿಗೆ ನೀಡಲು ಸಾಧ್ಯ. ಜೊತೆಗೆ ಜಿಲ್ಲೆಯಲ್ಲಿನ ಅಶಕ್ತರು ಮತ್ತು ವಸತಿಹೀನರಿಗೆ ನೆರವು ನೀಡಬಹುದು\’ ಎಂದರು. `ಖಾಲಿ ಇರುವ ಸರಕಾರಿ ಭೂಮಿಯನ್ನು ಸರಕಾರಿ ಉದ್ದೇಶಗಳಿಗೆ ಅಗತ್ಯವಿದ್ದರೆ ಆ ಯೋಜನೆಗೆ ಅಗತ್ಯವಿರುವ ಪ್ರಮಾಣದ ಭೂಮಿಯನ್ನು ಕಾಯ್ದಿರಿಸಿ, ಉಳಿದ ಭೂಮಿಯನ್ನು ಘೋಷಣೆ ಮಾಡಿ\’ ಎಂದು ಸೂಚಿಸಿದರು. ಯಾವುದೇ ಕಾರಣಕ್ಕೂ ಲಭ್ಯ ಜಮೀನಿನ ಮಾಹಿತಿಯನ್ನು ಮರೆಮಾಚದಂತೆ ಸೂಚಿಸಿದರು.