
ಜೊಯಿಡಾ: ಕಾಡಿನಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿಗೆ ಕಳ್ಳ ಬಂದೂಕು ಹಿಡಿದು ಶಿಖಾರಿಗೆ ಅಡ್ಡಾಡುತ್ತಿದ್ದ ಇಬ್ಬರು ಸಿಕ್ಕಿಬಿದ್ದಿದ್ದು, ಅವರ ಬಳಿಯಿದ್ದ ಬಂದೂಕನ್ನು ಅರಣ್ಯ ಸಿಬ್ಬಂದಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಅರಣ್ಯ ಸಿಬ್ಬಂದಿ ಬಸವರಾಜ ಚಿಪ್ಪಲಗಟ್ಟಿ, ನಿಂಗಪ್ಪ ಲಮಾಣಿ, ಮಡಿವಾಳಪ್ಪ ಅಂಗಡಿ, ಬಾಬುಲೊ ನಾಯ್ಕ, ಪ್ರಕಾಶ ವೆಳಿಫ, ಮಂಜುನಾಥ ಮಾಸ್ಕೆರಿ ಎಂಬಾತರು ಜೂ 26ರ ರಾತ್ರಿ ಅಣಶಿ ಕಾಡು ಪ್ರವೇಶಿಸಿದ್ದರು. ಜೂ 27ರ ನಸುಕಿನ ಜಾವ ಕುಂಡಲದ ಬಳಿ ಬೆಳಕು ಕಂಡಿದ್ದು, ಅರಣ್ಯ ಸಿಬ್ಬಂದಿ ಮರಗಳ ಅಡಿ ಅವಿತುಕೊಂಡರು. ಆಗ ಶಿಕಾರಿಗೆ ಬಂದಿದ್ದ ಮಂಜುನಾಥ ಗಣಪತಿ ವೆಳಿಪ ಹಾಗೂ ಸಂದೀಪ ಪಾಂಡುರoಗ ವೆಳಿಪ ಎಂಬಾತರು ಸಿಕ್ಕಿಬಿದ್ದಿದ್ದು, ಪ್ರಾಣಿ ಹತ್ಯೆಗಾಗಿ ಕಾಡಿಗೆ ಬಂದಿರುವುದಾಗಿ ಅವರು ಒಪ್ಪಿಕೊಂಡರು.
ಈ ವೇಳೆ ಅವರ ಬಳಿ ಇದ್ದ ಬಂದೂಕಿಗೆ ಪರವಾನಿಗೆ ಇರಲಿಲ್ಲ. ಲೈಟ್ ಹಾಗೂ ಬಂದೂಕನ್ನು ವಶಕ್ಕೆ ಪಡೆದ ಅರಣ್ಯ ಸಿಬ್ಬಂದಿ ವನ್ಯಜೀವಿ ವಲಯ ಕಚೇರಿಗೆ ವಿಧಿ ವಿಜ್ಞಾನ ಪ್ರಯೋಗಾಯಲದವರನ್ನು ಕರೆಯಿಸಿ, ಬಂದೂಕಿನಲ್ಲಿದ್ದ ಗುಂಡುಗಳನ್ನು ಹೊರತೆಗೆದರು. ಆರೋಪಿಗಳನ್ನು ಹಳಿಯಾಳದ ಜೈಲಿಗೆ ಒಪ್ಪಿಸಲಾಗಿದ್ದು, ಬಂದೂಕನ್ನು ಅರಣ್ಯ ಸಿಬ್ಬಂದಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.